ಹುಬ್ಬಳ್ಳಿ: ಸರ್ಕಾರಿ ಕಚೇರಿಯ ಮುಂಭಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ಮದ್ಯಪಾನ ಮಾಡದಂತೆ ಬುದ್ಧಿವಾದ ಹೇಳಿದ್ದಕ್ಕೆ ಸರ್ಕಾರಿ ಅಧಿಕಾರಿಯ ಮೇಲೆಯೇ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಅದರಗುಂಚಿ ಗ್ರಾಮದ ಗ್ರಾಮ ಆಡಳಿತಾಧಿಕಾರಿ ನೀಲಪ್ಪ ಹಲ್ಲೆಗೊಳಗಾದವರು. 'ಎಂದಿನಂತೆ ತಾನು ಚಾವಡಿಯಲ್ಲಿ ಭೂ ದಾಖಲೆಗಳಿಗೆ ಆಧಾರ್ ಕಾರ್ಡ್ ಸೀಡಿಂಗ್ ಕಾರ್ಯ ಮುಗಿಸಿ ಮನೆಗೆ ತೆರಳುತ್ತಿದ್ದೆ. ಈ ವೇಳೆ ಚಾವಡಿ ಮುಂಭಾಗದಲ್ಲಿ ಇಬ್ಬರು ಯುವಕರು ಮದ್ಯಪಾನ ಮಾಡುತ್ತಿದ್ದರು. ಕಚೇರಿ ಮುಂಭಾಗದಲ್ಲಿ ಮದ್ಯಪಾನ ಹಾಗೂ ಅನೈತಿಕ ಚಟುವಟಿಕೆ ನಡೆಸುವುದು ಅಪರಾಧ, ಹೀಗೆ ಮಾಡದಂತೆ ಬುದ್ಧಿವಾದ ಹೇಳಿದೆ. ಆದರೆ, ಗ್ರಾಮದ ಮಹಮ್ಮದ್ ಸಾಬ್ ನದಾಫ್ ಹಾಗೂ ಅವರ ಸಹೋದರ ತನಗೆ ಅವಾಚ್ಯವಾಗಿ ನಿಂದಿಸಿ, ಬೈಕಿನ ಚಾವಿಯನ್ನು ತೆಗೆದುಕೊಂಡು ತಲೆ ಹಾಗೂ ಕಣ್ಣಿನ ಕೆಳಭಾಗಕ್ಕೆ ಗಾಯವಾಗುವಂತೆ ಥಳಿಸಿದ್ದಾರೆ' ಎಂದು ಹಲ್ಲೆಗೊಳಗಾದ ಅಧಿಕಾರಿ ನೀಲಪ್ಪ ದೂರು ನೀಡಿದ್ದಾರೆ.
ಸ್ಥಳೀಯರು ಗಾಯಗೊಂಡ ಅಧಿಕಾರಿಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಶಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಯ ಆರೋಗ್ಯ ವಿಚಾರಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿಗ್ನಲ್ನಲ್ಲಿ ಎಕ್ಸ್ಲರೇಟರ್ ಹೆಚ್ಚಿಸಿ ಕಿರಿಕಿರಿ: ಪ್ರಶ್ನಿಸಿದ ಐಪಿಎಸ್ ಅಧಿಕಾರಿ ಮಗನ ಮೇಲೆ ಹಲ್ಲೆ - Assault Case