ಮೈಸೂರು : ರಾಜ ಪರಂಪರೆಯ ರೀತಿ ಅರಮನೆಯ ರಾಜವಂಶಸ್ಥರು ಶರನ್ನವರಾತ್ರಿ ಪೂಜಾ ಕಾರ್ಯ ನಡೆಸಲು ನಾಳೆ ಅಂದರೆ ಸೆಪ್ಟಂಬರ್ 27 ರಂದು ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ನಡೆಸಲಿದ್ದಾರೆ. ಆದ್ದರಿಂದ ನಾಳೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ಅರಮನೆ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಯಾದ ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 3 ರಿಂದ ಅಕ್ಟೋಬರ್ 12ರ ವರೆಗೆ ಅರಮನೆಯ ರಾಜವಂಶಸ್ಥರು ರಾಜ ಪರಂಪರೆಯಂತೆ ಅರಮನೆಯೊಳಗೆ ಶರನ್ನವರಾತ್ರಿ ಪೂಜೆಗಳನ್ನ ನಡೆಸಲಿದ್ದಾರೆ. ಜತೆಗೆ ರಾಜವಂಶಸ್ಥ ಯದುವೀರ್ ಒಡೆಯರ್ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಇದರ ಅಂಗವಾಗಿ ನಾಳೆ ಅಂದರೆ ಸೆಪ್ಟಂಬರ್ 27 ರಂದು ಅರಮನೆಯ ಭದ್ರತಾ ಕೊಠಡಿಯಲ್ಲಿರುವ ಸಿಂಹಾಸನದ 13 ಬಿಡಿಭಾಗಗಳನ್ನ ಅಂಬಾ ವಿಲಾಸ ಅರಮನೆಯ ದರ್ಬಾರ್ ಹಾಲ್ಗೆ ತಂದು, ನುರಿತ ಅರಮನೆ ಸಿಬ್ಬಂದಿ ಹಾಗೂ ಗೆಜ್ಜಗಳ್ಳಿಯ ಹಿರಿಯ ಸಿಂಹಾಸನ ಜೋಡಣೆ ಮಾಡುವ ಜನರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಸಿಂಹಾಸನ ಜೋಡಣೆ ಮಾಡಲಿದ್ದಾರೆ.
ಈ ದಿನಗಳಲ್ಲಿ ಅರಮನೆಗೆ ಪ್ರವೇಶವಿರುವುದಿಲ್ಲ : 'ನಾಳೆ ಅಂಬಾ ವಿಲಾಸ ಅರಮನೆಯ ದರ್ಬಾರ್ ಹಾಲ್ನಲ್ಲಿ ಸಿಂಹಾಸನ ಜೋಡಿಸುವ ಹಿನ್ನೆಲೆ ಸೆಪ್ಟೆಂಬರ್ 27 ರಂದು ಬೆಳಗ್ಗೆ 10 ಗಂಟೆಯಿಂದ 1 ಗಂಟೆವರೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.
ಜತೆಗೆ ಅಕ್ಟೋಬರ್ 3 ರಂದು ದರ್ಬಾರ್ ಹಾಲ್ನಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸಿ, ಸಿಂಹಾಸಕ್ಕೆ ಪೂಜೆ ಸಲ್ಲಿಸುವ ಹಿನ್ನೆಲೆ ಅಕ್ಟೋಬರ್ 3 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ಅಕ್ಟೋಬರ್ 11 ರಂದು ಅರಮನೆಯೊಳಗಡೆ ಆಯುಧ ಪೂಜೆ ಹಾಗೂ ಅಕ್ಟೋಬರ್ 12 ರಂದು ವಿಜಯದಶಮಿ ಇರುವುದರಿಂದ ಅಂದು ಸಹ ಅರಮನೆಯೊಳಗಡೆ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ' ಎಂದು ಅರಮನೆ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಯಾದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಮೈಸೂರು: ದಸರಾ ಸಿಡಿಮದ್ದಿನ ತಾಲೀಮಿನಲ್ಲಿ ಗಜಪಡೆ ಗಲಿಬಿಲಿ - DASARA ELEPHANTS AFRAID