ಮಂಡ್ಯ: ಯುವಕನ ಮೇಲೆ ಅನ್ಯ ಕೋಮಿನ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿ, ಮನೆಗಳಿಗೆ ನುಗ್ಗಿ ಮಹಿಳೆಯರಿಗೆ ಬೆದರಿಕೆ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಬೆಳ್ಳೂರಿನ ಅಭಿಲಾಶ್ ಎಂಬುವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಗುಂಪು ಇದೇ ವೇಳೆ ಇತರರ ಮೇಲೆ ಹಲ್ಲೆ ನಡಸಿ ಮನೆಗಳಿಗೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಲ್ಲದೆ ಮಹಿಳೆಯರಿಗೆ ಬೆದರಿಕೆಯೊಡ್ಡಿದ್ದಾರೆ. ಸೋಮವಾರ ಸಂಜೆ ದುಷ್ಕೃತ್ಯ ಎಸಗಿದ್ದು, ಇದರಿಂದ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಕಾರಣ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಕಳೆದ ಶುಕ್ರವಾರ ಸಂತೆ ಬೀದಿ ರಸ್ತೆಯಲ್ಲಿ ಅಭಿಲಾಶ್, ನಾಗೇಶ್ ಮತ್ತು ಅನ್ಯಕೋಮಿನ ಯುವಕರ ನಡುವೆ ಸಣ್ಣ ವಿಚಾರಕ್ಕೆ ಮಾತಿನ ಚಕಮಕಿ ನಡೆದಿತ್ತು. ಮಾರನೇ ದಿನ ಅನ್ಯ ಕೋಮಿನ ಗುಂಪು ಅವರಿಬ್ಬರನ್ನು ನಾವು ಬಿಡೋದಿಲ್ಲ ಎಂದು ಅಲ್ಲಿದ್ದ ಮಹಿಳೆಯರನ್ನ ಬೆದರಿಸಿದ್ದರು. ಇದರಿಂದ ಹೆದರಿದ ಮಹಿಳೆಯರು ಬೆಳ್ಳೂರು ಪೊಲೀಸ್ ಠಾಣೆಗೆ ತೆರಳಿ ವಿಚಾರ ತಿಳಿಸಿದ್ದರು.
ಆದರೆ ನಿನ್ನೆ ಸಂಜೆ ಏರಿಯಾಗೆ ನುಗ್ಗಿದ ಅನ್ಯ ಕೋಮಿನ ಗುಂಪಿನವರು ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ತಡೆಯಲು ಬಂದವರ ಮೇಲೂ ಹಲ್ಲೆ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ತಕ್ಷಣ ಸ್ಥಳೀಯರು ಗಾಯಾಳು ಅಭಿಲಾಶ್ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದಾಂಧಲೆಗೂ ಮುನ್ನ ವಿದ್ಯುತ್ ತೆಗೆದಿರುವುದು ಪೂರ್ವನಿಯೋಜಿತ ಸಂಚು ಎಂದು ಜನರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಮಾಜಿ ಶಾಸಕ ಸುರೇಶ ಗೌಡ ಮಾತನಾಡಿ, ಯುವಕರ ಗುಂಪೊಂದು ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮಹಿಳೆಯರಿಗೆ ಬೆದರಿಕೆ ಹಾಕಿದ್ದಲ್ಲದೆ ಮನೆಗಳಿಗೆ ಹಾನಿ ಮಾಡಿದ್ದಾರೆ. ಘಟನೆ ನಂತರ ಪೊಲೀಸರು ಹಲವರನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರನ್ನೆಲ್ಲ ಬಿಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಅಷ್ಟೇ ಅಲ್ಲದೆ ಸಿಸಿಟಿವಿ ಫೂಟೇಜ್ಗಳನ್ನ ಯಾರೂ ಕೂಡ ನೀಡದಂತೆ ಬೆದರಿಕೆ ಹಾಕಲಾಗಿದೆ. ನಾವು ಯಾರ ಪರವೂ ಅಲ್ಲ, ನ್ಯಾಯದ ಪರ. ಆದರೆ ಕಾಂಗ್ರೆಸ್ ಸರ್ಕಾರ ಒಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುತ್ತ ಬೇರೆ ಧರ್ಮಿಯರ ಬಗ್ಗೆ ನಿರ್ಲಕ್ಷ್ಯ ತೋರಿದೆ ಎಂದು ದೂರಿದರು.
ಬೆಳ್ಳೂರು ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ, ಮುನ್ನೆಚ್ಚರಿಕೆ ವಹಿಸಿದ್ದರೆ ಘಟನೆ ತಡೆಯಬಹುದಾಗಿತ್ತು. ದುಷ್ಕೃತ್ಯ ಮಾಡಿರುವವರನ್ನು ರಕ್ಷಿಸಲು ಮುಂದಾಗಬಾರದು. ಪೊಲೀಸರು ತಾರತಮ್ಯ ಮಾಡದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಬೆಳ್ಳೂರಿನ ಎಲ್ಲಾ ಧರ್ಮದ ಜನತೆ ಶಾಂತಿ ಕಾಪಾಡಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಹಾಡಹಗಲೇ ಡಾಕ್ಟರ್ ಮನೆ ಕಳ್ಳತನಕ್ಕೆ ಯತ್ನ: ಸಿಸಿಟಿವಿ ದೃಶ್ಯ - Thieves Attempt Theft