ಕಾರವಾರ(ಉತ್ತರ ಕನ್ನಡ): ಅನ್ಯಾಯದ ವಿರುದ್ಧ ಪ್ರಶ್ನೆ ಮಾಡುವವರ ಸಂಖ್ಯೆ ಕಡಿಮೆ. ಆದರೆ ತನ್ನ ಸಮುದಾಯದಲ್ಲಿ ಅನ್ಯಾಯ ಆಗುತ್ತಿದೆ ಎಂದು ಪ್ರಶ್ನಿಸಿದ ಮಹಿಳೆ ಮೇಲೆ ಅದೇ ಸಮುದಾಯದ ಮಹಿಳೆಯರು ಸೇರಿಕೊಂಡು ಹಲ್ಲೆಗೈದ ಆರೋಪ ಕೇಳಿ ಬಂದಿದೆ. ಮಹಿಳೆ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿದರೂ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಸಂತ್ರಸ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಸಿದ್ಧಿ ಜನಾಂಗದಿಂದ ದಮಾಮಿ ಹೋಮ್ ಸ್ಟೇ ಪ್ರಾರಂಭಿಸಲಾಗಿದೆ. ಸಮುದಾಯದ ಸಂಸ್ಕೃತಿಯನ್ನು ಇತರರಿಗೆ ತಿಳಿಸುವುದು, ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಹಾಗು ಸಿದ್ದಿ ಮಹಿಳೆಯರಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರದ ಅನುದಾನದ ಸಹಾಯದಿಂದ ಹೋಮ್ ಸ್ಟೇ ನಿರ್ಮಿಸಲಾಗಿದೆ. ಆದರೆ ಈ ಹೋಮ್ ಸ್ಟೇ ನಿರ್ಮಾಣದಲ್ಲಿ ಅವ್ಯವಹಾರವಾಗಿದೆ ಎಂದು ಆರ್ಟಿಐ ಮೂಲಕ ಮಹಿಳೆ ಮಾಹಿತಿ ಕೇಳಿದ್ದರು. ಈ ಮಾಹಿತಿ ಕೇಳಿದ್ದಕ್ಕೆ ಫೆ.5ರ ರಾತ್ರಿ ಯಲ್ಲಾಪುರ ಬಸ್ ನಿಲ್ದಾಣದ ಬಳಿ ನಾಲ್ವರು ಮಹಿಳೆಯರು ಸೇರಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿ ಬಟ್ಟೆ ಹರಿದಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಘಟನೆ ನಡೆದಾಗ ಯಾರೂ ರಕ್ಷಣೆಗೆ ಬರಲಿಲ್ಲ. ಪೊಲೀಸರಿಗೆ ವಿಷಯ ತಿಳಿಸಿದರೂ ಆರೋಪಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ನಾನು ಹರಿದ ಬಟ್ಟೆಯಲ್ಲಿಯೇ ಠಾಣೆಗೆ ತೆರಳಿದರೂ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಕೊನೆಗೆ ಪ್ರಜ್ಞೆ ಕಳೆದುಕೊಂಡಿದ್ದರಿಂದ ನನ್ನನ್ನು ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಗೆ ದಾಖಲಿಸಿದರು. ಹತ್ತು ದಿನ ಆಸ್ಪತ್ರೆಯಲ್ಲಿದ್ದು ಮನೆಗೆ ತೆರಳಿದಾಗ ಉಸಿರಾಟದ ಸಮಸ್ಯೆಯಾಗಿ ಇದೀಗ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಈ ಕುರಿತು ಮಾತನಾಡಿ, "ಇಂತಹ ಕೃತ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ. ನಿಲ್ದಾಣದಲ್ಲಿ ಒಬ್ಬರು ಪೊಲೀಸ್ ಇರ್ತಾರೆ. ಆದರೆ ಆ ದಿನ ಇರಲಿಲ್ಲ. ಪೊಲೀಸರು ದೂರು ಸ್ವೀಕರಿಸದ ಬಗ್ಗೆ ಮಹಿಳೆ ಆರೋಪಿಸಿದ್ದಾರೆ. ಘಟನೆಯ ತನಿಖೆಯಾಗಬೇಕು. ಮಾನಭಂಗ ನಡೆಸಿದ ಆರೋಪಿತರ ಮೇಲೆ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸಬಾರದು" ಎಂದರು.
ಇದನ್ನೂ ಓದಿ: ಡ್ರಗ್ ಪೆಡ್ಲರ್‌ಗಳ ಬಂಧನಕ್ಕೆ ಹೋದ ಪೊಲೀಸರ ಮೇಲೆ ಗುಂಪು ಹಲ್ಲೆ: ಮಹಿಳಾ ಕಾನ್‌ಸ್ಟೇಬಲ್ ಆಸ್ಪತ್ರೆಗೆ ದಾಖಲು