ಬೆಂಗಳೂರು: ನಗರದಲ್ಲಿ ನಿರ್ಮಾಣವಾಗುತ್ತಿರುವ ಏಷ್ಯಾದ ಅತಿ ಎತ್ತರದ ಮೆಟ್ರೋ ನಿಲ್ದಾಣವು ವರ್ಷಾಂತ್ಯಕ್ಕೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹಳದಿ ಮಾರ್ಗದ ಪ್ರಾಯೋಗಿಕ ಸಂಚಾರ ಕೂಡ ಪೂರ್ಣಗೊಂಡಿದೆ.
ನಗರದ ಜಯದೇವ ಮೆಟ್ರೋ ಜಂಕ್ಷನ್ ಅತಿ ದೊಡ್ಡ ಮೆಟ್ರೋ ನಿಲ್ದಾಣ ಎನ್ನುವ ಹೆಗ್ಗಳಿಕೆ ಪಾತ್ರವಾಗಲಿದ್ದು, ಈ ವರ್ಷಾಂತ್ಯಕ್ಕೆ ಈ ನಿಲ್ದಾಣ ಕಾರ್ಯಾರಂಭ ಮಾಡುವ ಸಾಧ್ಯತೆ ಹೆಚ್ಚಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಬಹುಹಂತದ ಇಂಟರ್ ಚೇಂಜ್ ನಿಲ್ದಾಣ ಇದಾಗಿದ್ದು, ಹಳದಿ ಮತ್ತು ಗುಲಾಬಿ ಮೆಟ್ರೋ ರೈಲು ಮಾರ್ಗದ ಭಾಗವಾಗಿ ಡಿಸೆಂಬರ್ 2024ರಿಂದ ಈ ಮೆಟ್ರೋ ಮಾರ್ಗವು ಕಾರ್ಯಾರಂಭ ಆಗುವ ಸಾಧ್ಯತೆಯಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಡಬಲ್ ಎಲಿವೇಟೆಡ್ ರಸ್ತೆ ಜತೆಗೆ ಆರು ಹಂತಗಳನ್ನು ಹೊಂದಿರುವ ಈ ಮೆಟ್ರೋ ನಿಲ್ದಾಣವು ನಗರದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಜಯದೇವ ಆಸ್ಪತ್ರೆ ಬಳಿ ನಿರ್ಮಾಣವಾಗುತ್ತಿರುವ ಈ ಮೆಟ್ರೋ ನಿಲ್ದಾಣವು ಕೆಳಗಿನ ರಸ್ತೆಯಿಂದ 29 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿದ್ದು, ಅಂದಾಜು 200 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಮೆಟ್ರೋ ನಿಲ್ದಾಣದಲ್ಲಿವೆ 6 ಹಂತಗಳು: ಈ ಮೆಟ್ರೋ ನಿಲ್ದಾಣ 6 ಹಂತಗಳನ್ನು ಹೊಂದಿದ್ದು, ಮೊದಲ ಹಂತದಲ್ಲಿ ಡೈರಿ ಸರ್ಕಲ್‌ನಿಂದ ಬನ್ನೇರುಘಟ್ಟದವರೆಗೆ ಅಂಡರ್ ಪಾಸ್ ರಸ್ತೆ, 2ನೇ ಹಂತದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ರಸ್ತೆಯಿದೆ. ಇದೇ ಮಾರ್ಗದ 3ನೇ ಹಂತದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಯಿದ್ದು, 4ನೇ ಹಂತದಲ್ಲಿ ಜಯದೇವ ಸರ್ಕಲ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಎಲಿವೇಟೆಡ್ ರಸ್ತೆಯಿದೆ. 5ನೇ ಹಂತದಲ್ಲಿ ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಲೇನ್, 6ನೇ ಹಂತದಲ್ಲಿ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮೆಟ್ರೋ ಲೇನ್ ಇರಲಿದೆ.
ಹಳದಿ ಮಾರ್ಗದ ಪ್ರಾಯೋಗಿಕ ಸಂಚಾರ ಪೂರ್ಣ: ಹಳದಿ ಮಾರ್ಗದ ಪ್ರಾಯೋಗಿಕ ಸಂಚಾರದ ಎಲ್ಲಾ ಪರೀಕ್ಷೆಗಳು ಮುಗಿದಿದ್ದು, 1 ರೈಲನ್ನು ಬಳಸಿ ಈ ಪರೀಕ್ಷೆಗಳನ್ನು ನಡೆಸಲಾಗಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಹಳದಿ ಮಾರ್ಗದಲ್ಲಿ ಆರ್ಡಿಎಸ್ಒ ತಂಡದಿಂದ ಪರೀಕ್ಷೆಯನ್ನು ನಡೆಸಲಾಗಿತ್ತು. ಅವರು ಕೊಟ್ಟ ವರದಿಯನ್ನು ತಾಂತ್ರಿಕ ಅನುಮೋದನೆಗೆ ಭಾರತೀಯ ರೈಲ್ವೆ ಆಧಿಕಾರಿಗಳಿಗೆ ಕಳುಹಿಸಿ ಅನುಮೋದನೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಸಿಎಂಆರ್ಎಸ್ ತಂಡದವರು ಕೆಲವು ಪರೀಕ್ಷೆ ನಡೆಸಲಿದ್ದಾರೆ. ಅವರಿಂದ ಕೂಡ ಅನುಮೋದನೆ ಪಡೆದ ನಂತರ ಮಾರ್ಗವನ್ನು ವಾಣಿಜ್ಯ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್ ಮಾಹಿತಿ ನೀಡಿದರು.
ಯಾವುದೇ ಪರೀಕ್ಷೆ ನಡೆದರು ಕೆಲವು ಸಲಹೆ ಸೂಚನೆ ಹಾಗೂ ತಾಂತ್ರಿಕ ಅವಲೋಕನಗಳು ಇರುವುದು ಸಹಜವಾಗಿದೆ. ಅದನ್ನು ಪೂರ್ಣಗೊಳಿಸಿದ ನಂತರವೇ ಪ್ರಮಾಣಪತ್ರ ಸಿಗಲಿದೆ. ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಮೊದಲ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ವಾಣಿಜ್ಯ ಸಂಚಾರ ಮುಕ್ತಗೊಂಡಾಗ 15 ನಿಮಿಷದ ಅವಧಿಗೆ ಒಂದರಂತೆ 8 ರೈಲುಗಳು ಸಂಚಾರ ನಡೆಸಲಿವೆ ಎಂದು ತಿಳಿಸಿದರು.
ಇದನ್ನೂ ಓದಿ: ಪ್ರಯಾಣಿಕರಿಗೆ ಖುಷಿ ಸುದ್ದಿ: ದೀಪಾವಳಿ ಹಬ್ಬದ ಸೀಸನ್ನಲ್ಲಿ 5,975 ವಿಶೇಷ ರೈಲು ಸಂಚಾರ - SPECIAL TRAINS