ಬೆಂಗಳೂರು : ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಕೆಐಎಡಿಬಿಯಿಂದ ಭೂಮಿ ಹಂಚಿಕೆ ಆರೋಪ ಕೇಳಿಬಂದಿದ್ದು, ಸಿಎ ಸೈಟ್ಗಳನ್ನು ಪಡೆಯಲು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಇದೆ. ಹಾಗಾಗಿ ಕೆಐಎಡಿಬಿ ಹಂಚಿಕೆ ಪ್ರಕ್ರಿಯೆಯ ಎಲ್ಲಾ ದಾಖಲೆಗಳನ್ನು ಒದಗಿಸಿ ಸಾರ್ವಜನಿಕವಾಗಿ ಮುಂದಿಡಬೇಕು ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥ್ನಾರಾಯಣ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಶಾಸಕರ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಈಗ ಆರೋಪ ಬರುತ್ತಿದ್ದಂತೆ ಚಾಣಕ್ಯ ವಿವಿಗೆ ಕೊಟ್ಟಿರಲಿಲ್ವಾ ಎಂದು ಕೇಳಿದ್ದಾರೆ. ಸಿಎ ಸೈಟ್ಗೂ, ಭೂಮಿ ಹಂಚಿಕೆಗೂ ಬಹಳ ವ್ಯತ್ಯಾಸ ಇದೆ. ಸಂಸ್ಥೆ, ಕೈಗಾರಿಕೆಗೆ ಭೂಮಿ ಮಂಜೂರು ಬೇಡಿಕೆ ಬಂದಾಗ ಅದನ್ನು ಒದಗಿಸಬೇಕಾದದ್ದು ಕೆಐಎಡಿಬಿ ಕರ್ತವ್ಯ. ಚಾಣಕ್ಯ ವಿವಿಗೆ ಕೆಲವು ರಿಯಾಯಿತಿ ಕೊಟ್ಟಿದ್ದೇವೆ. ಇಲ್ಲ ಅಂತಾ ಅಲ್ಲ. ಸಿಎ ಸೈಟ್ ಹಂಚಿಕೆಗೆ ಕೆಲವು ಮಾರ್ಗಸೂಚಿ ಇದೆ. ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಬೇಕಾಬಿಟ್ಟಿಯಾಗಿ ಕೊಟ್ಟಿದ್ದಾರೆ ಎಂಬ ಆಪಾದನೆ ಸರ್ಕಾರದ ಮೇಲಿದೆ ಎಂದರು.
ಯಾವ ಉದ್ದೇಶ ಏನು ಅಂತಾನೂ ಇಲ್ಲದೇ ತಮಗೆ ಬೇಕಾದವರಿಗೆ ಕೊಟ್ಟು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಸ್ಪಷ್ಟ ಆಪಾದನೆ ಇದೆ. ಸ್ವಾರ್ಥತೆ ಇರುವವರಿಗೆ ಕೊಟ್ಟು ಇನ್ನೂ ಲೂಟಿ ಮಾಡಿ ಅಂತಾ ಸರ್ಕಾರದ ಆಸ್ತಿ ಕೊಟ್ಟಿರುವುದು ದುರದೃಷ್ಟಕರ. ಕಾಂಗ್ರೆಸ್ ಸರ್ಕಾರ ಆತ್ಮಸಾಕ್ಷಿ, ಜವಾಬ್ದಾರಿ ಇಲ್ಲದೇ ಈ ರೀತಿ ನಿರ್ವಹಣೆ ಮಾಡುತ್ತಿದೆ. ಖರ್ಗೆಯವರು ಪಾಪ ಯೂ ಟರ್ನ್, ಬಿ ಟರ್ನ್, ಸಿ ಟರ್ನ್ ಅಂತಾ ದೊಡ್ಡ ದೊಡ್ಡ ಮಾತಾಡುತ್ತಾರೆ. ಭ್ರಷ್ಟಾಚಾರ ಆಗಿದೆ ಏನು ಅಂತಾ ಕೇಳಿದರೆ ಅವರದ್ದು ಉತ್ತರ ಇಲ್ಲ. ಕೊನೆಯ ಪಕ್ಷ ಉತ್ತರ ಕೊಡುವ ಶಕ್ತಿಯನ್ನಾದರೂ ನೀವು ಬೆಳೆಸಿಕೊಳ್ಳಿ ಎಂದು ಟೀಕಿಸಿದರು.
ನಮಗೆ ಯಾವ ಸರ್ಕಾರ ಬೀಳಿಸೋ ಇಚ್ಛೆ ಇಲ್ಲ: ಆಪರೇಷನ್ ಕಮಲಕ್ಕಾಗಿ 100 ಕೋಟಿ ಆಫರ್ ಮಾಡಲಾಗುತ್ತಿದೆ ಎನ್ನುವ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥ್ನಾರಾಯಣ್, ನಮಗೆ ಯಾವ ಸರ್ಕಾರ ಬೀಳಿಸೋ ಇಚ್ಛೆ ಇಲ್ಲ. ಅವರಿಗೆ 136 ಸ್ಥಾನ ಕೊಟ್ಟಿದ್ದಾರೆ. ನೀವು ಉತ್ತಮ ಅಧಿಕಾರ ನಡೆಸಿ. ಗಮನ ಬೇರೆಡೆ ಸೆಳೆಯಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಇದೇ ಮೊದಲಲ್ಲ, ಅನೇಕ ಬಾರಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ನಿಮ್ಮ ತಿಳುವಳಿಕೆ, ಜ್ಞಾನ ಕೆಟ್ಟದ್ದಕ್ಕೆ ಬಳಕೆ ಮಾಡಿಕೊಳ್ಳಬೇಡಿ. ಮಂಡ್ಯ ಜನ ನಿಮ್ಮ ಮೇಲೆ ಬಹಳಷ್ಟು ವಿಶ್ವಾಸ ಇಟ್ಟಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಸರಿಯಾದ ರಸ್ತೆ ಇಲ್ಲ. ಮೊದಲು ಜನರ ಕೆಲಸ ಮಾಡಿ. ನೀವು ಶಾಸಕರಾಗಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬೇಡಿ. ನಿಮಗೆ ನೂರು ಕೋಟಿ ಆಫರ್ ಕೊಟ್ಟವರ ಮೇಲೆ ದೂರು ದಾಖಲಿಸಿ ಎಂದು ಹೇಳಿದರು.
ಸಿದ್ದರಾಮಯ್ಯ ಒಳ್ಳೆಯವರು ಅಂತ ಕೆಲ ಮಠಾಧೀಶರು ಬೆಂಬಲ ನೀಡಿರಬಹುದು. ಅವರು ಮಾಡಿರೋ ತಪ್ಪನ್ನ ಮಠಾಧೀಶರಿಗೆ ಮನವರಿಕೆ ಮಾಡಿಕೊಡಬೇಕಿದೆ. ಭ್ರಷ್ಟಾಚಾರ ವಿಚಾರದಲ್ಲಿ ಅನೇಕ ನೈತಿಕ ಹೇಳಿಕೆ ಕೊಟ್ಟಿದ್ದಾರೆ. ಪ್ರಭಾವ ಬೀರುತ್ತೆ, ಅದಕ್ಕೆ ರಾಜೀನಾಮೆ ಕೊಡಬೇಕು ಅಂತ ಹಿಂದೆ ಹೇಳಿದ್ದರು. ಆದ್ರೆ ಈಗ ಆರೋಪ ಬಂದರೂ ರಾಜೀನಾಮೆ ಕೊಡಲ್ಲ ಅಂತ ಹೇಳ್ತಿದ್ದಾರೆ ಎಂದರು.
ವರ್ಗಾವಣೆಯಲ್ಲಿ ಭ್ರಷ್ಟಾಚಾರ ಕಾಣ್ತಿದೆ: ಪ್ರತಿಯೊಬ್ಬ ಮಠಾಧೀಶರಿಗೂ ನ್ಯಾಯಯುತವಾಗಿ ಇರೋಣ. ಸತ್ಯದ ಪರವಾಗಿ ಇರೋಣ ಅಂತ ಮನವಿ ಮಾಡ್ತೀನಿ. ದಲಿತರ ಹಣ ಲೂಟಿ ಆಗಿದೆ. ಹಣ ವರ್ಗಾವಣೆ ಆಗಿದೆ. ಚಂದ್ರಶೇಖರನ ಅನ್ನೋ ಅಧಿಕಾರಿ ಮೇಲೆ ಭ್ರಷ್ಟಾಚಾರ ಆರೋಪ ಬಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ್ರು. ತಪ್ಪು ಮಾಡದಿದ್ರೂ, ಆಪಾದನೆ ಬಂದಿದ್ದಕ್ಕೆ ಹೆದರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ್ರು. ಇಂದು ನೇರವಾಗಿ ಭ್ರಷ್ಟಾಚಾರ ಆಪಾದನೆ ಸಾಬೀತಾದ್ರೂ ಸಿಎಂ ರಾಜೀನಾಮೆ ಕೊಟ್ಟಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡಿರೋದು ಸ್ಪಷ್ಟವಾಗಿದೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ಕಾಣ್ತಿದೆ. ಇವರಿಗೆ ಆತ್ಮಸಾಕ್ಷಿ ಇದೆಯಾ? ಆತ್ಮಹತ್ಯೆ ಬಗ್ಗೆ ನಾವು ಮಾತಾಡಲ್ಲ. ಜನ ನೊಂದಿದ್ದಾರೆ. ನಿಮಗೆ ನೈತಿಕತೆ ಇಲ್ಲ. ಭ್ರಷ್ಟಾಚಾರಿ ಆದ್ರೂ ಕುರ್ಚಿ ಬಿಡಲ್ಲ ಅಂತ ಕುಳಿತಿದ್ದೀರಿ. ನಾವೆಲ್ಲರೂ ನಿಮ್ಮ ರಾಜೀನಾಮೆಗೆ ಆಗ್ರಹ ಮಾಡ್ತೀವಿ ಎಂದು ಅಶ್ವತ್ಥನಾರಾಯಣ್ ಹೇಳಿದರು.
ಚನ್ನಪಟ್ಟಣ ಎರಡು ವ್ಯಕ್ತಿ, ಎರಡು ಶಕ್ತಿ. ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಇಬ್ಬರು ವ್ಯಕ್ತಿ, ಒಂದು ಶಕ್ತಿ. ಹಿಂದೆ ಕುಮಾರಸ್ವಾಮಿ ಆಯ್ಕೆಯಾಗಿದ್ರು. ಆದ್ರೆ ಈಗ ಮಾತುಕತೆ ನಡೆಸಿ ಒಗ್ಗಟ್ಟಿನಿಂದ ಹೋಗಬೇಕಿದೆ. ಎಲ್ಲಾ ನಮ್ಮ ನಾಯಕರು, ವರಿಷ್ಠರ ಜೊತೆ ಮಾತನಾಡಲಿದ್ದು, ನಂತರ ಕುಮಾರಸ್ವಾಮಿ ಜೊತೆ ಮಾತನಾಡಿ ಯಾವ ನಿಲುವು ಅಂತ ತೀರ್ಮಾನ ಆಗಲಿದೆ. ನಾಳೆ ದೆಹಲಿಯಲ್ಲಿ ಚರ್ಚೆಯಾಗಲಿದೆ ಎಂದು ತಿಳಿಸಿದರು.
ಸಿಎಂ ಟ್ವೀಟ್ ಖಾತೆಯಿಂದ ವೈಯಕ್ತಿಕ ವಿಚಾರಗಳ ಟ್ವೀಟ್ ವಿಚಾರದ ಕುರಿತು ಮಾತನಾಡಿದ ಅಶ್ವತ್ಥ್ ನಾರಾಯಣ್, ನೀವು ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದೀರಿ. ಕೇಂದ್ರದ ನಾಯಕರ ನಿಂದನೆಗೆ ಸರ್ಕಾರದ ಸಾಮಾಜಿಕ ಜಾಲತಾಣದ ಖಾತೆ ಬಳಕೆ ಮಾಡಿಕೊಳ್ತಿದ್ದೀರಿ. ಅವರ ಸಿಬ್ಬಂದಿ ಮತ್ತು ಖಾತೆ ನಿರ್ವಹಣೆ ಮಾಡ್ತಿರೋರು ಕೀಳುಮಟ್ಟಕ್ಕೆ ಇಳಿದಿರುವುದನ್ನು ತೋರಿಸಲಿದೆ. ಇದನ್ನ ಸರಿಪಡಿಸುವ ಕೆಲಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ : ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಜಾರಿನಿರ್ದೇಶನಾಲಯ ದಾಳಿ ಸ್ವಾಗತಾರ್ಹ: ಅಶ್ವತ್ಥನಾರಾಯಣ - Ashwath Narayan