ಮೈಸೂರು: ಆಷಾಢ ಮಾಸದ ಪ್ರಯುಕ್ತ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ. ಮಾಹಿತಿ ನೀಡಿದ್ದಾರೆ.
ಪ್ರತಿ ಶುಕ್ರವಾರ ಮತ್ತು ವರ್ಧಂತಿ ನಡೆಯುವ ಜುಲೈ 12, 19, 26, 27 ಹಾಗೂ ಆಗಸ್ಟ್ 2ರ ಕಡೆಯ ಶುಕ್ರವಾರ ದೇವಾಲಯದ ವತಿಯಿಂದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಬೆಟ್ಟಕ್ಕೆ ಪ್ರಯಾಣಿಸಬಹುದು ಎಂದು ಅವರು ತಿಳಿಸಿದ್ದಾರೆ.
ಬೆಟ್ಟಕ್ಕೆ ವಾಹನಗಳ ಪ್ರವೇಶ ನಿಷೇಧ: ಶನಿವಾರ ಹಾಗೂ ಭಾನುವಾರ ಸಾರ್ವಜನಿಕರ ವಾಹನಗಳು ಬೆಟ್ಟಕ್ಕೆ ಬರುವಂತಿಲ್ಲ. ವಾಹನಗಳನ್ನು ಲಲಿತ ಮಹಲ್ ಪಾರ್ಕಿಂಗ್ನಲ್ಲಿಯೇ ನಿಲ್ಲಿಸಬೇಕು. ಬಳಿಕ ಕೆಎಸ್ಆರ್ಟಿಸಿ ಬಸ್‌ಗಳ ಮೂಲಕ ಟಿಕೆಟ್ ಪಡೆದು ಚಾಮುಂಡಿ ಬೆಟ್ಟಕ್ಕೆ ಆಗಮಿಸಬೇಕು. (ಶಕ್ತಿ ಯೋಜನೆ ಅನ್ವಯ). ಬೆಟ್ಟದ ಗ್ರಾಮಸ್ಥರು ಈ ಸಮಯದಲ್ಲಿ ಬೆಟ್ಟದ ಗ್ರಾಮದಲ್ಲಿ ವಿಳಾಸವಿರುವ ಆಧಾರ್ ಕಾರ್ಡ್ ಹಾಜರುಪಡಿಸಿ ಪ್ರವೇಶ ಪಡೆಯಬಹುದು.
ದೇವಾಲಯದ ಪ್ರವೇಶಕ್ಕೆ ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ₹300 ಪ್ರವೇಶ, ₹50 ಪ್ರವೇಶ ಮತ್ತು ಸರ್ವ ದರ್ಶನದ ಮೂಲಕ ದೇವಾಲಯಕ್ಕೆ ಪ್ರವೇಶ ಕಲ್ಪಿಸಲಾಗಿದೆ.
ಭಕ್ತರ ಅನುಕೂಲಕ್ಕೆ ಲಲಿತ ಮಹಲ್ ಪಾರ್ಕಿಂಗ್, ಮಹಿಷಾಸುರ ವೃತ್ತ ಹಾಗು ವಿಶೇಷ ಪ್ರವೇಶದ ಬಳಿ ಪ್ರವೇಶದ ಟಿಕೆಟ್ಗಳನ್ನು ವಿತರಿಸುವ ವ್ಯವಸ್ಥೆಯಾಗಿದೆ. ಶೌಚಾಲಯ, ಕುಡಿಯುವ ನೀರು, ವೈದ್ಯಕೀಯ ತುರ್ತುಚಿಕಿತ್ಸೆ ವ್ಯವಸ್ಥೆ ಹಾಗೂ ತುರ್ತು ವಾಹನದ ವ್ಯವಸ್ಥೆ ಮಾಡಲಾಗಿದೆ.
ಪ್ರಸಾದ ವಿತರಿಸಲು ಅನುಮತಿ ಕಡ್ಡಾಯ: ಭಕ್ತರಿಗೆ ಪ್ರಸಾದ ವಿತರಿಸುವ ಸಾರ್ವಜನಿಕರು, ಕಡ್ಡಾಯವಾಗಿ ಅಂಕಿತಾಧಿಕಾರಿಗಳು, ಆಹಾರ ನಿಯಂತ್ರಣ ಇಲಾಖೆಯಿಂದ ದೃಢೀಕರಣ ಪಡೆಯಬೇಕು. ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ಶಾಖೆಯಲ್ಲಿ ಅನುಮತಿ ಪತ್ರದೊಂದಿಗೆ ತಮಗೆ ನಿಗದಿಪಡಿಸಿರುವ ಸಮಯದಲ್ಲೇ ಬಂದು ಪ್ರಸಾದ ವಿತರಿಸಬೇಕು. ಸ್ಥಳವನ್ನು ತಾವೇ ಸ್ವಚ್ಛಗೊಳಿಸಬೇಕು ಎಂದು ಸೂಚಿಸಲಾಗಿದೆ.
ಪ್ಲಾಸ್ಟಿಕ್ ಮುಕ್ತ ಆಷಾಢ ಮಾಸ: ಈ ಆಷಾಢ ಮಾಸವನ್ನು ಪ್ಲಾಸ್ಟಿಕ್‌ಮುಕ್ತ ಆಷಾಢ ಮಾಸವೆಂದು ಘೋಷಿಸಲಾಗಿದೆ. ಹೀಗಾಗಿ, ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬೆಟ್ಟಕ್ಕೆ ತರುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ತಂದಲ್ಲಿ ದಂಡ ವಿಧಿಸಲಾಗುತ್ತದೆ. ಬೆಟ್ಟದಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಕೂಡಾ ಯಾವುದೇ ಪ್ಲಾಸ್ಟಿಕ್ ಬಳಸದಂತೆ, ಪೂಜಾ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಬ್ಯಾಗ್ ಮತ್ತು ಇತರೆ ಪ್ಲಾಸ್ಟಿಕ್ ಮೂಲಕ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕಾಮೆರಾ ಅಳವಡಿಸಲಾಗಿದೆ.
ಇದನ್ನೂ ಓದಿ: ವಾರದ ಭವಿಷ್ಯ: ಈ ರಾಶಿಯವರ ಪ್ರೇಮ ಸಂಬಂಧಕ್ಕೆ ಸಿಗಲಿದೆ ಪೋಷಕರ ಒಪ್ಪಿಗೆ - Weekly Horoscope