ಮಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂಡಾಯವೆದ್ದು ಪುತ್ತೂರಿನಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ಅರುಣ್ ಕುಮಾರ್ ಪುತ್ತಿಲ ಶನಿವಾರ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗೊಂಡರು. ಸಂಜೆಯ ವೇಳೆಗೆ ಪುತ್ತಿಲ ಪರಿವಾರದ ಕಾರ್ಯಕರ್ತರೊಂದಿಗೆ ಕಚೇರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲರಿಗೆ ಪಕ್ಷದ ಶಾಲು ಹಾಕಿ, ಸದಸ್ಯತ್ವ ನೀಡಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಬರಮಾಡಿಕೊಂಡರು. ಪುತ್ತಿಲ ಪರಿವಾರದ ಮುಖಂಡರಾದ ಪ್ರಸನ್ನಮಾರ್ತಾ, ಉಮೇಶ್, ಅನಿಲ್ ಮತ್ತಿತರರು ಕೂಡಾ ಪಕ್ಷ ಸೇರಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, "ಕಳೆದ ವರ್ಷ ಕೆಲವು ಗೊಂದಲ ಸೃಷ್ಟಿಯಾಗಿತ್ತು. ಈಗ ಅವೆಲ್ಲವನ್ನೂ ಸರಿಪಡಿಸಲಾಗಿದೆ. ಇನ್ನು ಮುಂದೆ ಪುತ್ತಿಲ ಪರಿವಾರ ಎಂಬುದು ಇಲ್ಲ. ಎಲ್ಲವೂ ಬಿಜೆಪಿ ಹೆಸರಿನಲ್ಲಿಯೇ ನಡೆಯಲಿದೆ" ಎಂದರು.
ಬಳಿಕ, ಅರುಣ್ ಕುಮಾರ್ ಪುತ್ತಿಲ ಮಾತನಾಡಿ, "ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಲಾಗಿದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಒಳ್ಳೆಯ ಬೆಳವಣಿಗೆಯಾಗಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ದೇಶಕ್ಕೆ ಇನ್ನೂ 10 ವರ್ಷಗಳ ಕಾಲ ಬೇಕು. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ" ಎಂದು ಹೇಳಿದರು.
ಮಾಧ್ಯಮದವರನ್ನು ತಳ್ಳಿ ಅನುಚಿತ ವರ್ತನೆ: ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತ ಎನ್ನಲಾದ ಸಂದೀಪ್ ಎಂಬಾತ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆಯೂ ನಡೆಯಿತು. ವರದಿಗೆ ತೆರಳಿದ ಮಾಧ್ಯಮದವರನ್ನು ತಳ್ಳಾಡಿ, "ಇಲ್ಲಿ ಯಾಕೆ ಬರುವುದು?. ನಮಗೆ ಮಾಧ್ಯಮದವರ ಅಗತ್ಯವಿಲ್ಲ. ನಾವು ಒಂದಾಗಿ ಆಯಿತು" ಎಂದು ಹೇಳಿ ಅಡ್ಡಿಪಡಿಸಿದ್ದಾನೆ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲ ಮರಳಿಗೂಡಿಗೆ: ಬಂಡಾಯ ಶಮನ