ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬೆಳಗಾವಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ(ಜಿಟಿಟಿಸಿ) ಹೊಸ ಕೋರ್ಸ್ ಆರಂಭಿಸಲಾಗಿದೆ. ಡಿಪ್ಲೊಮಾ ಇನ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್ ಕೋರ್ಸ್ ಪರಿಚಯಿಸಲಾಗಿದೆ.
ಈ ಕುರಿತು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ ಪ್ರಾಚಾರ್ಯರಾದ ಬಿ.ಜಿ.ಮೊಗೇರ, 2024–25ನೇ ಸಾಲಿನಲ್ಲಿ ವಿವಿಧ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಈ ಭಾಗದ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಅತೀ ಅವಶ್ಯವಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಡಿಪ್ಲೊಮಾ ಇನ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್ ಕೋರ್ಸ್ ಆರಂಭಿಸಿದ್ದೇವೆ. ಕೋರ್ಸ್ ಆರಂಭಿಸುವ ಮುನ್ನ ನಾವು ಕೆಲವು ಇಂಜಿನಿಯರಿಂಗ್ ಕಾಲೇಜು ಮತ್ತು ಕೈಗಾರಿಕೆಗಳ ಜೊತೆ ಚರ್ಚಿಸಿದ್ದೆವು. ನಮ್ಮಲ್ಲಿ ಅತ್ಯಾಧುನಿಕ ಲ್ಯಾಬ್ ಸೆಟಪ್ ಇದೆ. ಎಐಸಿಟಿ ಮಾನ್ಯತೆ ಕೂಡ ಸಿಕ್ಕಿದೆ. ಎಸ್ಎಸ್ಎಲ್ಸಿಯಲ್ಲಿ ಶೇ.40, ಶೇ.50ರಷ್ಟು ಅಂಕ ಪಡೆದವರಿಗೆ ಕಂಪ್ಯೂಟರ್ ಸೈನ್ಸ್ ಮಾಡಲು ಆಗೋದಿಲ್ಲ. ಅಂಥವರಿಗೆ ಇದರಿಂದ ಅನುಕೂಲ ಆಗುತ್ತದೆ ಎಂದರು.
ಫೈಥಾನ್, ಕೋಡಿಂಗ್ ಸಾಫ್ಟ್ವೇರ್ಗಳು ಮತ್ತು ರೋಬೋಟ್ಸ್ ತಯಾರಿಕೆ ಈ ಕೋರ್ಸ್ ವಿಶೇಷತೆಗಳು. ಕೌಶಲ್ಯ ತರಬೇತಿ ನೀಡಿ ಉದ್ಯೋಗ ಅವಕಾಶ ನೀಡುತ್ತಿದ್ದೇವೆ. ನಮ್ಮಲ್ಲಿ ಕೋರ್ಸ್ ಪೂರ್ಣಗೊಳಿಸಿದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಕೆಲಸ ಗಿಟ್ಟಿಸಿಕೊಂಡು ಒಳ್ಳೆಯ ವೇತನ ಪಡೆಯುತ್ತಿದ್ದಾರೆ. ನೂರಕ್ಕೆ ನೂರು ಪ್ಲೇಸ್ಮೆಂಟ್ ಆಗುತ್ತದೆ. ವಿದ್ಯಾರ್ಥಿಗಳ ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಿ.ಜಿ.ಮೊಗೇರ ಕೇಳಿಕೊಂಡರು.
ಜಿಟಿಟಿಸಿ ಹೆಚ್ಒಡಿ ರಮಾಕಾಂತ ಮಠ ಮಾತನಾಡಿ, ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನಮ್ಮಲ್ಲಿ ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್, ಡಿಪ್ಲೊಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್, ಡಿಪ್ಲೊಮಾ ಇನ್ ಆಟೋಮೇಷನ್ ಆ್ಯಂಡ್ ರೋಬೋಟಿಕ್ಸ್ ಕೋರ್ಸ್‌ಗಳಿವೆ. ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಡಿಪ್ಲೊಮಾ ಇನ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್ ಕೋರ್ಸ್ ಪರಿಚಯಿಸಲಾಗಿದೆ. ನಾಲ್ಕು ವರ್ಷಗಳ ಕೋರ್ಸ್ ಇದಾಗಿದೆ. ಪಿಯು ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದವರು ಲ್ಯಾಟರಲ್ ಎಂಟ್ರಿ ಮೂಲಕ ನೇರವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ಪ್ರವೇಶ ಪಡೆದುಕೊಳ್ಳಬಹುದು. ಅಲ್ಲದೇ ದೀರ್ಘಾವಧಿ ಕೋರ್ಸ್‌ಗಳ ಜತೆಗೆ, ಅಲ್ಪಾವಧಿ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಬೆಳಗಾವಿ, ಚಿಕ್ಕೋಡಿ ಮತ್ತು ಗೋಕಾಕದಲ್ಲೂ ಜಿಟಿಟಿಸಿಗಳಿದ್ದು, ಗುಣಾತ್ಮಕ ಶಿಕ್ಷಣ ಹಾಗೂ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಸಿದ್ಧತೆ: ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಚಿಂತನೆ - Second PUC Exam 3