ಬೆಳ್ತಂಗಡಿ(ದಕ್ಷಿಣ ಕನ್ನಡ): ಬೆಳಾಲು ನಿವಾಸಿ ನಿವೃತ್ತ ಶಿಕ್ಷಕ ಎಸ್ ಪಿ ಬಾಲಕೃಷ್ಣ ಭಟ್ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ, ವೃತ್ರಿಯಲ್ಲಿ ಜ್ಯೋತಿಷಿಯಾಗಿರುವ ರಾಘವೇಂದ್ರ ಕೆದಿಲಾಯ (53) ಹಾಗೂ ಆತನ ಪುತ್ರ ಮುರಳೀಕೃಷ್ಣ (20) ಬಂಧಿತ ಆರೋಪಿಗಳು.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದ್ದು, ಮೃತ ಬಾಲಕೃಷ್ಣ ಭಟ್ ಅವರ ಮಗಳ ಗಂಡ ಹಾಗೂ ಮೊಮ್ಮಗ (ಮಗಳ ಮಗ) ಸೇರಿ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸರು ಸಿ.ಸಿ ಕ್ಯಾಮರಾಗಳು, ಮೊಬೈಲ್ ಲೊಕೇಶನ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಮೂರು ದಿನಗಳಲ್ಲಿ ಪತ್ತೆಹಚ್ಚಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಘಟನೆಯ ಹಿನ್ನೆಲೆ: ಬೆಳಾಲುನಲ್ಲಿ ಆ.20ರಂದು ಮಧ್ಯಾಹ್ನ ಸುಮಾರಿಗೆ ನಿವೃತ್ತ ಶಿಕ್ಷಕ ಎಸ್.ಪಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರನ್ನು ಅವರ ಮನೆಯ ಅಂಗಳದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೊಲೆ ನಡೆದ ರೀತಿ ಹಾಗೂ ಮನೆಯಲ್ಲಿ ಯಾವುದೇ ಕಳ್ಳತನ ನಡೆಯದಿರುವುದನ್ನು ಗಮನಿಸಿದ ಪೊಲೀಸರು ಇದು ಪರಿಚಿತರಿಂದಲೇ ನಡೆದ ಕೃತ್ಯ ಎಂದು ಖಚಿತಪಡಿಸಿಕೊಂಡರು. ಅದಕ್ಕೆ ಪೂರಕವಾಗಿ ಊಟ ಮಾಡಿ ಎಸೆದಿದ್ದ ಎರಡು ಎಲೆಗಳು ಅಲ್ಲಿ ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಸಂಬಂಧಿಕರ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣದ ಹಿನ್ನೆಲೆ ಬಹಿರಂಗಗೊಂಡಿದೆ.
ಆಸ್ತಿ ಕೊಡದ ಕಾರಣಕ್ಕೆ ಕೊಲೆ: ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕಿಲ್ಲಾಯ ಅವರ ಮೃತಪಟ್ಟ ಪತ್ನಿಯ ಚಿನ್ನಾಭರಣಗಳನ್ನು ಮಗಳಾದ ವಿಜಯಲಕ್ಷ್ಮಿ ಅವರಿಗೆ ನೀಡದೆ ಲಾಕರ್ನಲ್ಲಿ ಇರಿಸಿದ್ದರು. ಜಾಗದಲ್ಲಿಯೂ ಪಾಲು ನೀಡಿರಲಿಲ್ಲ ಎನ್ನಲಾಗಿದೆ. ತಾನು ಬದುಕಿರುವವರೆಗೂ ಜಾಗ ಪಾಲು ಮಾಡುವುದಿಲ್ಲ ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಅಳಿಯ ಮತ್ತು ಮೊಮ್ಮಗ ಸೇರಿ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ. ಕಾಸರಗೋಡಿನಿಂದ ಮಾರಕಾಸ್ತ್ರದೊಂದಿಗೆ ಸ್ಕೂಟರಿನಲ್ಲಿ ಬಂದ ಅಪ್ಪ, ಮಗ ಬೆಳಾಲುನ ಮನೆಗೆ ಬಂದು ಊಟ ಮಾಡಿದ್ದಾರೆ. ಊಟದ ಬಳಿಕ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಹಲ್ಲೆಯ ವೇಳೆ ಮನೆಯಿಂದ ಹೊರಗೆ ಓಡಿದ ಅವರನ್ನು ಅಟ್ಟಾಡಿಸಿ ಕೊಲೆ ಮಾಡಿ, ಬಳಿಕ ಸ್ಕೂಟರ್ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆ ಆರೋಪಿ ಮುರಳೀಕೃಷ್ಣ ಈ ಹಿಂದೆ ಕಾಸರಗೋಡಿನ ಬದಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಂಗಳೂರು: ಆತ್ಮಹತ್ಯೆಗೆ ಶರಣಾದ ಮಗನ ಮೃತದೇಹದ ಮುಂದೆಯೇ ಪ್ರಾಣಬಿಟ್ಟ ತಾಯಿ - Mother Son Die