ಬೆಂಗಳೂರು: ಮದ್ಯ ಸೇವನೆ ಹಾಗೂ ಸಿಗರೇಟ್ ಸೇದುವ ಸಲುವಾಗಿ ಹಣಕ್ಕಾಗಿ ಸುಲಿಗೆ ಮಾಡುತ್ತಿದ್ದ ಮೂವರು ಸುಲಿಗೆಕೋರರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುರುಗನ್, ಅನಿಲ್ ಕುಮಾರ್ ಹಾಗೂ ತೇಜಸ್ ಬಂಧಿತರು.
ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಮೂವರು ಆರೋಪಿಗಳು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಕುಡಿತ ಹಾಗೂ ಸಿಗರೇಟ್ ವ್ಯಾಮೋಹಕ್ಕೆ ಅಂಟಿಕೊಂಡಿದ್ದ ಆರೋಪಿಗಳು ಅಕ್ರಮವಾಗಿ ಹಣ ಸಂಪಾದನೆ ಮಾಡಲು ಸುಲಿಗೆ ಮಾಡಲು ನಿರ್ಧರಿಸಿದ್ದರು.
ಜುಲೈ 7ರಂದು ಎನ್.ಆರ್.ಐ ಲೇಔಟ್ನಲ್ಲಿ ದೂರುದಾರ ವ್ಯಕ್ತಿಯು ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಡ್ಡಗಟ್ಟಿದ್ದರು. ವಾಚ್ ಹಾಗೂ ಮೊಬೈಲ್ ಕಸಿದಿದ್ದರು. ಬಳಿಕ ಬೆದರಿಸಿ ದೂರುದಾರರ ಫೋನ್ ಪೇಯಿಂದ 3700 ರೂಪಾಯಿ ಹಣ ಹಾಕಿಸಿಕೊಂಡು ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೂವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಗ ಮದ್ಯಪಾನ ಹಾಗೂ ಸಿಗರೇಟ್ ಸೇರಿದಂತೆ ಇನ್ನಿತರ ದುಶ್ಚಟ ತೀರಿಸಿಕೊಳ್ಳಲು ಹಣಕಾಸಿನ ಸಮಸ್ಯೆ ಇದ್ದುದ್ದರಿಂದ ಹಣ ಸಂಪಾದನೆ ಮಾಡಲು ಆರೋಪಿಗಳು ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ಹೋಗುವವರನ್ನ ಗುರಿಯಾಗಿಸಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.