ಬೆಂಗಳೂರು: ಚಾಕುವಿನಿಂದ ಇರಿದು ಯುವಕನನ್ನು ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಪುಲಿಕೇಶಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅರುಣ್ ಕುಮಾರ್, ಜಾನ್ ಜಾಕೋಬ್, ಆ್ಯಂಡ್ರ್ಯೂಸ್, ಪ್ರಶಾಂತ್ ಹಾಗೂ ಸಂಜೀವ್ ಬಂಧಿತ ಆರೋಪಿಗಳು. ಜೂನ್ 29ರಂದು ಪುಲಿಕೇಶಿನಗರ ವ್ಯಾಪ್ತಿಯ ಜೀವನಹಳ್ಳಿ ಸಮೀಪದ ರೈಲ್ವೆ ಟ್ರ್ಯಾಕ್ ಬಳಿ ವಿಘ್ನೇಶ್ ಅಲಿಯಾಸ್ ಅಪ್ಪು ಎಂಬಾತನ ಕೊಲೆ ನಡೆದಿತ್ತು.
ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಮಾತನಾಡಿ, ಜೀವನಹಳ್ಳಿ ಸ್ಲಂ ನಿವಾಸಿಯಾಗಿದ್ದ ವಿಘ್ನೇಶ್, ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ಅಕ್ಕಪಕ್ಕದ ಹುಡುಗರ ಮೇಲೆ ವಿನಾಕಾರಣ ಹಲ್ಲೆ ಮಾಡುತ್ತಿದ್ದ. ಅದೇ ರೀತಿ ಈ ಹಿಂದೆ ಒಮ್ಮೆ ಅರುಣ್ ಕುಮಾರ್ ಹಾಗೂ ಜಾನ್ ಜಾಕೋಬ್ ಮೇಲೆ ಹಲ್ಲೆ ಮಾಡಿದ್ದ ವಿಘ್ನೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದರು.
ಇತ್ತೀಚಿಗೆ ಜೀವನಹಳ್ಳಿಯಿಂದ ಶಿಫ್ಟ್ ಆಗಿದ್ದ ವಿಘ್ನೇಶ್, ಮಹಾಲಕ್ಷ್ಮಿ ಲೇಔಟ್ ಸಮೀಪದ ಕುರುಬರಹಳ್ಳಿಯಲ್ಲಿ ನೆಲೆಸಿದ್ದ. ಶನಿವಾರ ಮಧ್ಯಾಹ್ನ ಜೀವನಹಳ್ಳಿಗೆ ಬಂದಿದ್ದ ವಿಘ್ನೇಶ್ ಪುನಃ ಅರುಣ್ ಕುಮಾರ್ ಹಾಗೂ ಜಾನ್ ಜಾಕೋಬ್ ಜೊತೆ ಗಲಾಟೆ ಮಾಡಿಕೊಂಡಿದ್ದ. ಅದೇ ದಿನ ಸಂಜೆ ಜೀವನಹಳ್ಳಿಯ ರೈಲ್ವೆ ಟ್ರ್ಯಾಕ್ ಬಳಿ ಆರೋಪಿಗಳೊಂದಿಗೆ ಮುಖಾಮುಖಿಯಾಗಿದ್ದ ವಿಘ್ನೇಶ್ ಮತ್ತೊಮ್ಮೆ ಗಲಾಟೆ ಮಾಡಿಕೊಂಡು ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿ, ಆತನ ಬಳಿಯಿದ್ದ ಚಾಕುವಿನಿಂದಲೇ ಇರಿದು, ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದರು ಎಂದು ಮಾಹಿತಿ ನೀಡಿದರು.
ಘಟನೆಯ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಪುಲಿಕೇಶಿನಗರ ಠಾಣಾ ಪೊಲೀಸರು, ಪ್ರಕರಣ ದಾಖಲಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಹಾಸನ: ಎಸ್ಪಿಗೆ ದೂರು ನೀಡಲು ಬಂದ ಪತ್ನಿಯನ್ನೇ ಇರಿದು ಕೊಂದ ಪೊಲೀಸ್ ಕಾನ್ಸ್ಟೇಬಲ್ - POLICE CONSTABLE KILLS WIFE