ಹುಬ್ಬಳ್ಳಿ: ಅಫೀಮು ಮತ್ತು ಅಫೀಮು ಗಿಡದ ಪಾವಡರ್ ಪೊಪೆಸ್ಟ್ರಾ ಹೆಸರಿನ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಐವರನ್ನು ಮಂಗಳವಾರ ಬೆಳಗ್ಗೆ ಬಂಧಿಸುವಲ್ಲಿ ಕಸಬಾಪೇಟೆ ಪೊಲೀಸರು ಯಶಸ್ವಿಯಾಗಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಜುಗತರಾಮ್ ಪಟೇಲ್ (22), ಹೀಮಾ ಬಿಶ್ನೋಯ್ (41), ದನರಾಮ್ ಪಟೇಲ್ (34), ಶ್ರವಣಕುಮಾರ್ ಬಿಶ್ನೋಯ್ (33), ಓಂಪ್ರಕಾಶ್ ಬಿಶ್ನೋಯಿ (24) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರದ ಗಬ್ಬೂರ ಸರ್ಕಲ್ ಬಳಿಯಲ್ಲಿ 1,15,000 ಮೌಲ್ಯದ 150 ಗ್ರಾಂ ಅಫೀಮು ಮತ್ತು 3 ಕೆಜಿ ಅಫೀಮು ಗಿಡದ ಪಾವಡರ್, ಪೊಪೆಸ್ಟ್ರಾ, 5 ಮೊಬೈಲ್ ಫೋನ್, 1250 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು.
ಈ ಜಾಲ ರಾಜಸ್ಥಾನ ಮೂಲದ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಕೇಂದ್ರಿಕೃತ ಮಾಡಿಕೊಂಡು ಕಾರ್ಯಾಚರಣೆ ಮಾಡುತ್ತಿತ್ತು. ಆರೋಪಿಗಳು ಹುಬ್ಬಳ್ಳಿ, ಶಿವಮೊಗ್ಗ, ಶಿರಶಿ ಹಾಗೂ ಕುಮಟಾದಲ್ಲಿ ವಿವಿಧ ತರಹದ ಅಂಗಡಿಗಳನ್ನಿಟ್ಟುಕೊಂಡು ಈ ವೃತ್ತಿಗೆ ಇಳಿದಿದ್ದರು. ಬೆಳಗ್ಗೆ ನೀರಿನಲ್ಲಿ ಇದನ್ನು ಹಾಕಿಕೊಂಡು ಕುಡಿದರೆ ಶಕ್ತಿ ಬರುತ್ತದೆ. ಇದು ಡ್ರಗ್ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು. ಈ ಬಗ್ಗೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಬ್ಬಂದಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೇಂದ್ರಪ್ಪ ಹತ್ಯೆ ಪ್ರಕರಣ: ಆರೋಪಿ ಬಂಧನ - Hubballi Murder Case