ಬೆಂಗಳೂರು: ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಬರುವವರ ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೋರ್ವನನ್ನು ಸಿದ್ದಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಪಂಕಜ್ ಸಿಂಗ್ ಬಂಧಿತ ಆರೋಪಿಯಾಗಿದ್ದು, ಆತನಿಂದ 19.50 ಲಕ್ಷ ಮೌಲ್ಯದ 32 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್ ಮೂಲದವರಾದ ಆರೋಪಿಗಳು, ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಸ್ಟೇಡಿಯಂ ಬಳಿ ಜನಸಂದಣಿ ಇರುವಾಗ ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದರು. ಮೇ 18ರಂದು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯ ವೀಕ್ಷಿಸಲು ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಸಿದ್ದಾಪುರದಿಂದ ತಮ್ಮ ಕುಟುಂಬ ಸದಸ್ಯರೊಂದಿಗೆ ಬಂದಿದ್ದರು. ಈ ವೇಳೆ ಬಿಎಂಟಿಸಿ ಬಸ್‌ನಲ್ಲಿ ಜನಸಂದಣಿಯ ನಡುವೆ ಅವರ ಮೊಬೈಲ್ ಫೋನ್ ಅನ್ನು ಆರೋಪಿಗಳು ಎಗರಿಸಿದ್ದರು. ಬಸ್ ಇಳಿದ ಬಳಿಕ ಪರಿಶೀಲಿಸಿದಾಗ ಫೋನ್ ಇಲ್ಲದಿರುವುದನ್ನು ಗಮನಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ ಕೊನೆಗೆ ಸಿದ್ಧಾಪುರ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ಫೋನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ತನ್ನ ಮೂವರು ಸಹವರ್ತಿಗಳೊಂದಿಗೆ ಸೇರಿ ನಗರದ ವಿವಿಧೆಡೆ ಮೊಬೈಲ್ ಫೋನ್‌ಗಳನ್ನ ಕಳ್ಳತನ ಮಾಡುತ್ತಿದ್ದುದು ತಿಳಿದು ಬಂದಿದೆ. ಸದ್ಯ ಉಳಿದ ಮೂವರು ಆರೋಪಿತರು ಪರಾರಿಯಾಗಿದ್ದು, ಬಂಧಿತನ ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.