ಬಾಗಲಕೋಟೆ: ಇಲ್ಲಿನ ರಾಮಾರೂಢ ಮಠದ ಪರಮ ರಾಮಾರೂಢ ಸ್ವಾಮೀಜಿಗೆ ಬೆದರಿಕೆ ಹಾಕಿ, ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಆರೋಪ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 80 ಲಕ್ಷಕ್ಕೂ ಅಧಿಕ ಹಣ, ಎರಡು ಕಾರು ಸೇರಿದಂತೆ ಇತರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಬೆಳಗಾವಿ ವಿಭಾಗದ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಬಾಗಲಕೋಟೆ ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತ, "ಪರಮ ರಾಮಾರೂಢ ಸ್ವಾಮೀಜಿ ಅವರು, ಸೆ.27ರಂದು ದೂರು ನೀಡಿದ ಹಿನ್ನೆಲೆಯಲ್ಲಿ, ಸಿಇಎನ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಒಟ್ಟು ನಾಲ್ವರನ್ನು ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ಈ ಪ್ರಕರಣದ ಆರೋಪಿ ಪ್ರಕಾಶ್ ವೀರಪ್ಪ ಮುದೋಳ್ ಎನ್ನುವಾತ ಸ್ವಾಮೀಜಿ ನಂಬರ್ಗೆ ಕರೆ ಮಾಡಲು ಪ್ರಯತ್ನಿಸಿದಾಗ ಮಠದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಕಾಲ್ ಕನೆಕ್ಟ್ ಆಗಿರುವುದಿಲ್ಲ. ಅದಕ್ಕೋಸ್ಕರ ಕಲಾದಗಿ ಪೊಲೀಸ್ ಠಾಣೆಗೆ ಕರೆ ಮಾಡಿ ಅಲ್ಲಿಂದ ಹೈವೇ ಗಸ್ತು ಸಿಬ್ಬಂದಿ ನಂಬರ್ ತೆಗದುಕೊಂಡು ಅವರಿಗೆ ಕರೆ ಮಾಡಿದ ಆರೋಪಿ ನಾನು ಬೆಂಗಳೂರಿನಿಂದ ಡಿಎಸ್ಪಿ ಮಾತನಾಡುತ್ತಿರುವುದು. ತುಂಬಾ ಅರ್ಜೆಂಟ್ ಇದೆ ಸ್ವಾಮೀಜಿ ಅವರೊಂದಿಗೆ ಮಾತನಾಡಬೇಕಾಗುತ್ತದೆ. ಅವರಿಗೆ ಕಾಲ್ ಕನೆಕ್ಟ್ ಮಾಡಿ ಕೊಡಿ ಎಂದು ಆರೋಪಿ ಕೇಳಿದ್ದಾನೆ" ಎಂದರು.
"ಅಂದು ಮಾನವ ಸರಪಳಿ ನಡೆಯುತ್ತಿತ್ತು. ಆ ಕರ್ತವ್ಯದಲ್ಲಿ ಇರುವ ಕಾರಣಕ್ಕೆ ಈಗ ತೆರಳಲು ಸಾಧ್ಯವಿಲ್ಲ. ನಾನು ಡ್ಯೂಟಿಯಲ್ಲಿ ಇದ್ದೇನೆ ಎಂದು ತಿಳಿಸಿದ ಪೊಲೀಸ್ ಸಿಬ್ಬಂದಿ ಅರ್ಧಗಂಟೆ ಬಳಿಕ ಎಎಸ್ಐ ಅವರ ನಂಬರಿಂದ ಸ್ವಾಮೀಜಿ ಅವರಿಗೆ ಕರೆ ಸಂಪರ್ಕಿಸಿ ಕೊಟ್ಟಿದ್ದಾರೆ. ಆ ಕರೆಯಲ್ಲಿ ಆರೋಪಿ ಸ್ವಾಮೀಜಿಯೊಂದಿಗೆ ಮಾತನಾಡಿ ಅವರಿಂದ ಬೇರೆ ನಂಬರ್ ತೆಗೆದುಕೊಂಡಿದ್ದಾರೆ. ಬಳಿಕ ಆ ನಂಬರ್ಗೆ ಕರೆ ಮಾಡಿ ಸ್ವಾಮೀಜಿಗೆ ಬೆದರಿಕೆ ಹಾಕಿ ಒಂದು ಕೋಟಿ ರೂ. ಬೇಡಿಕೆ ಇಟ್ಟಿದ್ದಾನೆ. ಹೆದರಿದ್ದ ಸ್ವಾಮೀಜಿ ಅದೇ ದಿನ 61 ಲಕ್ಷ ಹಣ ಬೇರೆ ಬೇರೆ ಕಡೆಯಿಂದ ಒಟ್ಟುಗೂಡಿಸಿ ನೀಡಿದ್ದಾರೆ. ಆದರೆ ಮತ್ತೆ ಹಣದ ಬೇಡಿಕೆ ಇಟ್ಟಾಗ ಸಂಶಯ ಬಂದು ಸ್ವಾಮೀಜಿ ಪೊಲೀಸರಿಗೆ ದೂರು ನೀಡಿದ್ದಾರೆ" ಎಂದು ಐಜಿಪಿ ಮಾಹಿತಿ ನೀಡಿದರು.
"ಆರೋಪಿ 2023ಯಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ. ಈ ಹಿಂದೆ ಒಂದು ಶಾಲೆ ಕೂಡ ಆರಂಭಿಸಿದ್ದ. ಕೃಷಿಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಪ್ರಸ್ತುತ ಆತ ನಿರುದ್ಯೋಗಿಯಾಗಿದ್ದಾನೆ. ಈತನ ಮೇಲಿನ ತನಿಖೆ ವೇಳೆ ಈಗಾಗಲೇ ಆರೋಪಿ ವಿರುದ್ಧ 12 ಕೇಸ್ ದಾಖಲಾಗಿರುವುದು ಪತ್ತೆಯಾಗಿದೆ. ತನಿಖೆಯಲ್ಲಿ ಈ ಆರೋಪಿಯು ಸ್ವಾಮೀಜಿಗೆ ಈ ಮೊದಲಿಂದ ಪರಿಚಯ ಮಾಡಿಕೊಂಡಿರುವುದು ತಿಳಿದು ಬಂದಿದೆ. ಸೆ. 12 ತಾರೀಖಿಗೆ ಅವರ ಬಳಿ ತೆರಳಿದ್ದ ಆರೋಪಿ ಅವರ ಆರೋಗ್ಯ ವಿಚಾರಿಸಿ, 1ರಿಂದ 2 ಗಂಟೆ ಮಠದಲ್ಲಿ ಸಮಯ ಕಳೆದು ಅವರಿಂದ ಮೊಬೈಲ್ ನಂಬರ್ ತೆಗದುಕೊಂಡು ಹೋಗಿರುತ್ತಾನೆ. ಆ ದಿನದಂದ ಆರೋಪಿ ತನ್ನ ಪ್ಲಾನ್ ಅನ್ನು ಜಾರಿಗೆ ತರಲು ಆರಂಭಿಸಿದ್ದನ" ಎಂದು ವಿವರಿಸಿದರು.
"ಆರೋಪಿತರಿಂದ ಎರಡು ಕಾರು, 80 ಲಕ್ಷಕ್ಕೂ ಅಧಿಕ ನಗದು ಹಣ, ಮೂರು ಮೊಬೈಲ್, ಚೆಕ್ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಅಧಿಕಾರಿ ಎಂದು ಪೊಲೀಸ್ ವಾಹನದ ಮಾದರಿಯಲ್ಲಿ ಸೈರನ್, ಕರ್ನಾಟಕ ಸರ್ಕಾರ ಅಂತ ನಾಮಫಲಕ ಹಾಕಿಕೊಂಡು ಬಂದು ಬೆದರಿಸಿ ಮೋಸ ಮಾಡಿದ್ದಾರೆ. ವಂಚನೆ ಸೇರಿದಂತೆ ಇತರ ಆರೋಪದ ಅಡಿ, ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಸ್ವಾಮೀಜಿ ಅವರ ಏನು ಹಗರಣ ಇಲ್ಲದೆ ಕೋಟಿ ರೂಪಾಯಿಗಳು ಏಕೆ ನೀಡಿದರು ಎಂಬುದು ಸೇರಿದಂತೆ ಇತರ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ" ಎಂದು ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಬಡ್ಡಿ ಕಟ್ಟದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆರೋಪ - Hubballi Assault Case