ಕೊಪ್ಪಳ : ನಗರದ ಬಸ್ ನಿಲ್ದಾಣದ ಹತ್ತಿರ ಪೇಂಟ್ ಅಂಗಡಿಗೆ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ವಿವಿಧ ವ್ಯಾಪಾರಿ ಮಳಿಗೆಗಳು ಸುಟ್ಟು ಕರಕಲಾದ ಘಟನೆ ಸೋಮವಾರ ಜರುಗಿದೆ. ಜಿಲ್ಲಾ ಅಗ್ನಿಶಾಮಕ ವಾಹನಗಳು ಸೇರಿದಂತೆ ಖಾಸಗಿ ಅಗ್ನಿಶಾಮಕ ವಾಹನಗಳು ಸೇರಿ 8 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಜರುಗಿತು.
ಸ್ಥಳದಲ್ಲಿಯೇ ಮೊಕ್ಕಾಂ ಹೂಡಿರುವ ಡಿಸಿ ಹಾಗೂ ಎಸ್ಪಿ: ಕೊಪ್ಪಳದ ಹೃದಯ ಭಾಗವಾದ ಬಸ್ ನಿಲ್ದಾಣದ ಎದುರು ಸೋಮವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಈ ಹಿನ್ನೆಲೆ ಕೊಪ್ಪಳ ಡಿಸಿ ನಳಿನ್ ಅತುಲ್ ಮತ್ತು ಎಸ್ಪಿ ಯಶೋದಾ ವಂಟಗೋಡಿ ಮಧ್ಯಾಹ್ನ 3 ಗಂಟೆಯಿಂದ ಬೆಂಕಿ ನಂದಿಸುವವರೆಗೂ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಪೇಂಟ್ ಅಂಗಡಿಯಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಮಧ್ಯಾಹ್ನ ಮೂರು ಗಂಟೆಯಿಂದ ಆರು ಗಂಟೆವರೆಗೆ ಬೆಂಕಿ ನಂದಿಸೋ ಕೆಲಸ ಜರುಗಿತು.
''ಕೊಪ್ಪಳದ ಅಗ್ನಿಶಾಮಕ ವಾಹನಗಳ ಜೊತೆಗೆ ಸುತ್ತಮುತ್ತಲ ವಿವಿಧ ಫ್ಯಾಕ್ಟರಿಗಳ ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸಲಾಯಿತು. ಸುತ್ತಮುತ್ತಲಿನ ತಾಲೂಕಿನಿಂದ ಕೂಡಾ ಅಗ್ನಿಶಾಮಕ ವಾಹನಗಳನ್ನು ಕರೆಸಲಾಗಿತ್ತು. ಅಗ್ನಿ ಅವಘಡದಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂಬುದು ತಿಳಿದು ಬಂದಿದೆ. ಹತ್ತಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಆದರೆ, ಬೆಂಕಿ ಹೇಗೆ ಹೊತ್ತಿಕೊಂಡಿತು ಎನ್ನುವ ಬಗ್ಗೆ ಖಚಿತವಾದ ಮಾಹಿತಿ ತಿಳಿದುಬಂದಿಲ್ಲ. ಈ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ'' ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದ್ದಾರೆ.
ಇದನ್ನೂ ಓದಿ : 40 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಐರಾವತ ಬಸ್ಗೆ ಬೆಂಕಿ: ಸುಟ್ಟು ಕರಕಲು - Airavat Bus Caught Fire