ಮಂಗಳೂರು(ದಕ್ಷಿಣ ಕನ್ನಡ): ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಈ ಬಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಕಿಶೋರ್, ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
720 ಅಂಕಗಳಲ್ಲಿ 720 ಅಂಕ ಪಡೆದು ಜನರಲ್ ಮೆರಿಟ್ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಈ ಬಗ್ಗೆ ಪ್ರಥಮ ರ‍್ಯಾಂಕ್ ಪಡೆದ ಅರ್ಜುನ್ ಕಿಶೋರ್ ಮಾತನಾಡಿ, ನೀಟ್‌ನಲ್ಲಿ ರ‍್ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ ಮೊದಲ ರ‍್ಯಾಂಕ್ ಬರುತ್ತದೆ ಅಂದುಕೊಂಡಿರಲಿಲ್ಲ. ಮೊದಲ ರ‍್ಯಾಂಕ್ ಬಹಳ ಖುಷಿಕೊಟ್ಟಿದೆ. ದಿಲ್ಲಿಯ ಏಮ್ಸ್ ಸೇರುವ ಬಯಕೆ ನನಗೆ ಇದೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಎಕ್ಸ್‌ಪರ್ಟ್ ಕಾಲೇಜಿನ ನೀಟ್ ಮೊಡ್ಯುಲ್‌ಗಳು, ಉಪನ್ಯಾಸಕರು ನೀಡಿದ ಟಿಪ್ಸ್, ನೋಟ್ಸ್ ಜತೆಗೆ ಎನ್‌ಸಿಆರ್‌ಟಿ ಪಠ್ಯಪುಸ್ತಕ ಹಾಗೂ ನನ್ನ ಶ್ರಮ ಸೇರಿ ರ‍್ಯಾಂಕ್ ಗಳಿಸಲು ಸಾಧ್ಯವಾಯಿತು ಎಂದಿದ್ದಾರೆ.
ಅರ್ಜುನ್ ಅವರು ಮೈಸೂರು ಗೋಕುಲಂ ನಿವಾಸಿ, ಮೈಸೂರು ಮೆಡಿಕಲ್ ಕಾಲೇಜಿನ ಫಾರ್ಮಾಕಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಕಿಶೋರ್ ಮತ್ತು ಮೈಸೂರಿನ ಕ್ಯಾಗ್ರೋಕೇರ್ ಆಸ್ಪತ್ರೆಯ ಗೈನೋಕೋಲಾಜಿಸ್ಟ್ ಡಾ. ರಶ್ಮಿ ಅವರ ಪುತ್ರರಾಗಿದ್ದಾರೆ.