ಮಂಡ್ಯ: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನಗರಸಭಾ ಸದಸ್ಯರೂ ಆಗಿರುವ ನಹೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎನ್.ದೊಡ್ಡಯ್ಯ, ಕಾವ್ಯ ಶ್ರೀ, ಅರುಣ್‌ಕುಮಾರ್ ಎಂ.ಕೃಷ್ಣ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ.
ಬಿಜೆಪಿ ಸರ್ಕಾರದಲ್ಲಿ ಕೆ.ಶ್ರೀನಿವಾಸ್ ಮುಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ನೂತನ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಇದುವರೆಗೂ ಮುಡಾ ಅಧ್ಯಕ್ಷರ ಆಯ್ಕೆಗೆ ಒಲವು ತೋರಿರಲಿಲ್ಲ. ಇದೀಗ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮಂಡ್ಯ ಮುಡಾ ಅಧ್ಯಕ್ಷ-ಸದಸ್ಯರನ್ನು ನೇಮಿಸಿದೆ. ಮೊದಲ ಬಾರಿಗೆ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿರುವ ನಹೀಂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಪಿ.ರವಿಕುಮಾರ್ ಅವರ ಪರವಾಗಿ ಶ್ರಮ ವಹಿಸಿ ಕೆಲಸ ಮಾಡಿದ್ದರು.
ಮುಸ್ಲಿಂ ಮತಗಳು ಕಾಂಗ್ರೆಸ್ ಕಡೆಗೆ ಹರಿದುಬರುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಜೊತೆಗೆ ಸಚಿವರಾದ ಎನ್.ಚಲುವರಾಯಸ್ವಾಮಿ, ಜಮೀರ್ ಅಹಮದ್, ಶಾಸಕ ಪಿ.ರವಿಕುಮಾರ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವುದರಿಂದ ನಹೀಂಗೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಲಭಿಸಿದೆ ಎಂದು ಹೇಳಲಾಗುತ್ತಿದೆ.
5ನೇ ವಾರ್ಡ್‌ನಿಂದ ಚುನಾಯಿತರಾಗಿ ಆಯ್ಕೆಯಾಗಿರುವ ನಹೀಂ, ಅಂಬರೀಶ್ ಸಚಿವರಾಗಿದ್ದ ಸಮಯದಲ್ಲಿ ನಗರಸಭೆಗೆ ನಾಮ ನಿರ್ದೇಶನಗೊಂಡಿದ್ದರು. 2017ರ ಸೆಪ್ಟೆಂಬರ್‌ನಿಂದ ಜೂನ್ 2018ರವರೆಗೆ ಕಾಂಗ್ರೆಸ್‌ನ ಮುನಾವರ್ ಖಾನ್ ಅಧ್ಯಕ್ಷರಾಗಿದ್ದರು. ಅವರ ಬಳಿಕ ಮುಸ್ಲಿಂ ಸಮುದಾಯಕ್ಕೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಅವಕಾಶ ದೊರಕಿದೆ. ಇದೀಗ ನಗರಸಭೆ ಸದಸ್ಯ ಜವಾಬ್ದಾರಿಯ ಜೊತೆಗೆ ಮುಡಾ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯೂ ನಹೀಂಗೆ ದೊರಕಿದಂತಾಗಿದೆ.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ನೂತನ ಅಧ್ಯಕ್ಷರು, ನಾಲ್ವರು ಸದಸ್ಯರನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಬುಧವಾರ ಮಂಡ್ಯ ಮುಡಾ ಕಚೇರಿಯಲ್ಲಿ ನೂತನ ಅಧ್ಯಕ್ಷ ನಯೀಮ್, ಸದಸ್ಯರಾದ ಎನ್.ದೊಡ್ಡಯ್ಯ, ಅರುಣ್ ಕುಮಾರ್, ಎಂ.ಕೃಷ್ಣ, ಕಾವ್ಯಶ್ರೀ ಸೋಮಶೇಖರ್ ಅಧಿಕಾರ ಸ್ವೀಕರಿಸಿದರು. ಮಂಡ್ಯ ಕ್ಷೇತ್ರದ ಶಾಸಕ ಗಣಿಗ ಪಿ.ರವಿಕುಮಾರ್ ನೇತೃತ್ವದಲ್ಲಿ ಮುಡಾ ಅಧ್ಯಕ್ಷ ಮತ್ತು ಸದಸ್ಯರು ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ನೂತನ ಆಡಳಿತ ಮಂಡಳಿಯನ್ನ ಶಾಸಕ ಗಣಿಗ ಪಿ.ರವಿಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.
ಇದನ್ನೂ ಓದಿ: ಸಾರಿಗೆ ನಿಗಮಗಳಿಂದ ಪ್ರಸ್ತಾವ ಬಂದ ನಂತರ ದರ ಏರಿಕೆ ಬಗ್ಗೆ ತೀರ್ಮಾನ: ಸಚಿವ ರಾಮಲಿಂಗಾರೆಡ್ಡಿ - Minister Ramalingareddy