ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮೂಡಾ ಆರೋಪದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಡಿಸಿಎಂ ಆಗಿದ್ದಾಗ ಸಿದ್ದರಾಮಯ್ಯ ಒಂದು ಮನೆ ಕಟ್ಟಿದ್ದರು. ಯಾರ ಜಾಗದಲ್ಲಿ ನೀವು ಮನೆ ಕಟ್ಟಿದ್ದೀರಾ, ಆ ದಾಖಲೆ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಅಲರ್ಟ್ ಆಗಿದ್ದ ದಲಿತ ಸಿಎ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದವರು ಯಾರು?. 15 ನಿವೇಶನ ತೆಗೆದುಕೊಂಡಿರುವುದಲ್ಲದೇ ವಿಕಲಚೇತನ ದಲಿತ ವ್ಯಕ್ತಿಗೆ 24 ಸಾವಿರ ರೂ. ನೀಡಿ ಸೈಟ್ ಪಡೆಯುತ್ತಾರೆ. ಸಾಕಮ್ಮ ಎಂಬುವರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ 10 ಸಾವಿರ ರೂ. ಸ್ಕೈಯರ್ ಫೀಟ್ ಜಾಗ ಅಕ್ರಮವಾಗಿ ಪಡೆಯುತ್ತಾರೆ. ಆಮೇಲೆ ನಿವೇಶನ ತೆಗೆದುಕೊಂಡ ವ್ಯಕ್ತಿ ಬಂದು ನೋಡಿದಾಗ ಮನೆ ಕಟ್ಟಿರುವುದು ಗಮನಕ್ಕೆ ಬರುತ್ತದೆ. ಈ ಬಗ್ಗೆ ನನ್ನ ಬಳಿ ಈಗಲೂ ದಾಖಲೆ ಇದೆ ಎಂದು ಹೇಳಿದರು.
ನನ್ನದು ತೆರದ ಪುಸ್ತಕ ಅಂತಾ ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಾರೆ. ಅದನ್ನ ತೆಗೆಯಿರಿ ಯಾರಿಗೆ ನೀವು ಸೇಲ್ ಮಾಡಿದ್ದೀರಿ?. ಇನ್ನೂ ಯಾರ ಕೈಯಲ್ಲಿದೆ ಸೈಟ್, ಹೆಸರಿಗೆ ಮಾರಾಟ ತೋರಿಸಿಕೊಂಡಿದ್ದಾರೆ. ಅದನ್ನು ತೆಗೆದರೆ ಮತ್ತೊಂದು ರಾಮಾಯಣ ಶುರುವಾಗುತ್ತೆ ಎಂದು ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಹಿಸಿಕೊಳ್ಳಲು ಆಗ್ತಿಲ್ಲ: ನಾನು ಕೇಂದ್ರ ಸಚಿವನಾಗಿದ್ದಕ್ಕೆ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ರಾಜ್ಯಕ್ಕೆ ಬಂದರೆ ಇವರು ಸಹಿಸಲ್ಲ, ಇದು ನನ್ನ ಪರಿಸ್ಥಿತಿ. ಅವರ ನೋವಿಗೆ ಎಲ್ಲಿ ಔಷಧಿ ಕೊಡಲಿ ಎಂದು ವ್ಯಂಗ್ಯವಾಡಿದರು.
ಹಾಲಿನ ದರ ಏರಿಕೆ ಬಗ್ಗೆ ಕಿಡಿ: ಹಾಲಿನ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ವಿಚಾರವಾಗಿ ಮಾತನಾಡಿ, ಯಾರ ಬಳಿಯೋ ಕಿತ್ತುಕೊಂಡು ಯಾರಿಗೊ ದಾನ ಮಾಡಿದ ರೀತಿ ಇದೆ. ಗ್ರಾಹಕರ ಮೇಲೆ ಹೊರೆಹಾಕಿ ರೈತರಿಗೆ ಪ್ರೋತ್ಸಾಹಧನ ಕೊಡುತ್ತೇವೆ ಅಂತಾರೆ ಎಂದು ಕಿಡಿಕಾರಿದ್ದಾರೆ.
ಹಾಲು ಉತ್ಪಾದಕರ ಸಂಘದ ಜಿಲ್ಲೆಗಳಲ್ಲಿ ಒಂದೂವರೆ ಎರಡು ರೂಪಾಯಿ ಯಾಕೆ ಕಡಿಮೆ ಮಾಡಿದ್ದೀರಿ. ಎಲ್ಲೆಲ್ಲಿ ಕಡಿಮೆ ಮಾಡಿದ್ದಿರಲ್ಲಾ ಅಲ್ಲಿ ಬೆಲೆ ಏರಿಕೆ ಮಾಡಿದ್ದಿರಲ್ಲಾ. ಆ ದುಡ್ಡನ್ನ ರೈತರಿಗೆ ಕೊಡುತ್ತೇವೆ ಅಂತ ಹೇಳ್ತಿದ್ದಿರಲ್ಲಾ ಹಾಗಾದ್ರೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಹಾಲಿನ ಪ್ರೋತ್ಸಾಹ ದರ ಕಡಿಮೆ ಮಾಡಿದ್ದಿರಾ. ದಾಖಲೆ ಇಲ್ವಾ, ಪಟ್ಟಿ ಇಲ್ವಾ. ರೈತರಿಗೆ ಕೊಡುತ್ತೇವೆ ಅಂತ ಸುಳ್ಳು ಹೇಳಿ, ಒಂದು ಕಡೆ ರೈತರಿಗೂ ಇಲ್ಲಾ ಗ್ರಾಹಕರಿಗೂ ಇಲ್ಲಾ. ದುಡ್ಡು ಮಾತ್ರ ಸರ್ಕಾರ ವಸೂಲಿ ಮಾಡುತ್ತಿದೆ. ಇದು ನಿಮ್ಮ ಹವ್ಯಾಸ ಎಂದು ವಾಗ್ದಾಳಿ ಮಾಡಿದ್ದಾರೆ.
ನಿನ್ನೆ ನಾನು ಬೆಂಕಿ ಹಚ್ಚೋದಕ್ಕೆ ಹೋಗಿದ್ನಾ?: ಕೈಜೋಡಿಸಿ ಮನವಿ ಮಾಡ್ತಿನಿ, ಎಲ್ಲ ಅಣ್ಣತಮ್ಮಂದಿರು ನೆಮ್ಮದಿಯಿಂದ ಇರಬೇಕು. ಎಲ್ಲಾ ಅಣ್ಣತಮ್ಮಂದಿರ ತರ ಬದುಕಬೇಕು ಅಂತಾ ನಿನ್ನೆ ನಾಗಮಂಗಲದಲ್ಲಿ ಹೇಳಿದ್ದೇನೆ. ನಿನ್ನೆ ನಾನು ಬೆಂಕಿ ಹಚ್ಚೋದಕ್ಕೆ ಹೋಗಿದ್ನಾ?. ನಮಗೆ ಅಭಿವೃದ್ಧಿ ಅಂದ್ರೆ ಗೊತ್ತಿಲ್ಲಾವಂತಲ್ಲಾ. ಮಾಗಡಿಯಲ್ಲಿ 2012/13 ರಲ್ಲಿ ಸುಮಾರು 600 ಕೋಟಿ ರೂ. ಕೆಲಸ ಮಾಡದೆ, ಕಳ್ಳಬಿಲ್ ಮಾಡಿ ದುಡ್ಡು ಲೂಟಿಯಾಗಿದೆ ಅಂತ ವಿಧಾನಸೌದದಲ್ಲಿ ಹೇಳಿದ್ದು ಯಾರು?. ನಿನ್ನೆ ಕರೆದುಕೊಂಡು ಹೋಗಿ ಸಿಎಂ ಹತ್ತಿರ ಭಾಷಣ ಮಾಡಿಸಿದ್ದಾರಲ್ಲಾ ಮಾಗಡಿಯಲ್ಲಿ ನಡೆದ ಅಕ್ರಮವನ್ನ ಯಾರು ಮುಚ್ಚಿ ಹಾಕಿದ್ರು?. ಇವರಿಂದ ನಾನು ಪಾಠ ಕಲಿಬೇಕಾ? ಎಂದು ಪರೋಕ್ಷವಾಗಿ ಶಾಸಕ ಬಾಲಕೃಷ್ಣ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: 'ನಿಮ್ಮ ಶಾಸಕ ಮುನಿರತ್ನ ಬಾಯಿ ಶುದ್ಧಗೊಳಿಸಿ, ನಂತರ ಊರಿಗೆ ಬುದ್ಧಿ ಹೇಳಿ': ಸಿಎಂ ಸಿದ್ದರಾಮಯ್ಯ - CM Siddaramaiah