ಕೋಲಾರ: ಲೋಕಸಭೆ ಚುನಾವಣೆಗೆ ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು ಮುಂದುವರೆದಿದ್ದು, ಸದ್ಯ ಎರಡೂ ಬಣಗಳನ್ನು ಹೊರತುಪಡಿಸಿ ಮೂರನೇ ವ್ಯಕ್ತಿಯ ಹೆಸರು ಮುನ್ನೆಲೆಗೆ ಬಂದಿದೆ. ಈ ಮೂಲಕ ಬಣ ರಾಜಕೀಯಕ್ಕೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎನ್ನಲಾಗುತ್ತಿದೆ.
ಇದೀಗ ಬೆಂಗಳೂರಿನ ಮಾಜಿ ಮೇಯರ್ ವಿಜಯ್ ಕುಮಾರ್ ಅವರ ಪುತ್ರ ಗೌತಮ್ ಹೆಸರು ಮುನ್ನೆಲೆಗೆ ಬಂದಿದೆ. ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವೆ ಪೈಪೋಟಿ ಇದೆ.
ಅದರಂತೆ, ಕೆ.ಎಚ್.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಸಿಗಲಿದೆ ಎಂಬ ಸೂಚನೆ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಬಣದ ಶಾಸಕರು ರಾಜೀನಾಮೆಗೆ ಮುಂದಾಗಿದ್ದರು. ಅಲ್ಲದೆ, ಕೋಲಾರದಲ್ಲಿ ಬಲಗೈ ಸಮುದಾಯದವರಿಗೆ ಟಿಕೆಟ್ ಕೊಡಬೇಕು. ಜೊತೆಗೆ ಕೆ.ಎಚ್.ಮುನಿಯಪ್ಪ ಕುಟುಂಬಕ್ಕೆ ಅವಕಾಶ ಕೊಡಬಾರದು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲಾಗಿತ್ತು.
ಇತ್ತ ಕೆ.ಎಚ್.ಮುನಿಯಪ್ಪ ಸಹ ರಾಜ್ಯದಲ್ಲಿ ಮೂರು ಕಡೆ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಹೀಗಾಗಿ, ಕೋಲಾರದಲ್ಲಿ ಎಡಗೈ ಸಮುದಾಯಕ್ಕೆ ಅವಕಾಶ ನೀಡಬೇಕು. ಅಲ್ಲದೆ, ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ನೀಡಬೇಕು ಎಂದು ಪಟ್ಟುಹಿಡಿದಿದ್ದರು. ಈ ನಡುವೆ ಎರಡೂ ಬಣಗಳ ಅಭ್ಯರ್ಥಿಗಳ ಬದಲಿಗೆ ಮೂರನೇ ವ್ಯಕ್ತಿ, ಅಂದರೆ ಗೌತಮ್ ಅವರ ಹೆಸರು ಮುನ್ನೆಲೆಗೆ ಬಂದಿದೆ ಎಂದು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.
ಸಂಧಾನ ಸಭೆ: ಟಿಕೆಟ್ ಗೊಂದಲ ಬೆನ್ನಲ್ಲೇ ಗುರುವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಸಿಎಂ ಕಾವೇರಿ ನಿವಾಸದಲ್ಲಿ ಸಂಧಾನ ಸಭೆ ನಡೆದಿತ್ತು. ಸಭೆ ಬಳಿಕ ಮಾತನಾಡಿದ್ದ ಸಚಿವ ಬೈರತಿ ಸುರೇಶ್, ''ಕೋಲಾರದ ಕೈ ಶಾಸಕರು, ಪರಿಷತ್ ಸದಸ್ಯರ ಜೊತೆ ಸಭೆ ನಡೆಸಲಾಗಿದೆ. ಸಂಧಾನ ಸಭೆ ಯಶಸ್ವಿಯಾಗಿದೆ. ಸಿಎಂ, ಡಿಸಿಎಂ ಹಾಗೂ ಎಐಸಿಸಿಯ ತಿರ್ಮಾನವನ್ನು ಪಾಲಿಸುವುದಾಗಿ ಎಲ್ಲರೂ ತಿಳಿಸಿದ್ದಾರೆ'' ಎಂದಿದ್ದರು.
ಅಲ್ಲದೇ, ಸಚಿವ ಎಂಸಿ ಸುಧಾಕರ್ ಮಾತನಾಡಿ, ''ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಭೆಯಲ್ಲಿ ಸಿಎಂ ಹಾಗೂ ಡಿಸಿಎಂ ನಮ್ಮ ಅಭಿಪ್ರಾಯ ಪಡೆದಿದ್ದಾರೆ. ಭಿನ್ನಾಭಿಪ್ರಾಯ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅವರ ತೀರ್ಮಾನವನ್ನು ನಾವು ಒಪ್ಪುತ್ತೇವೆ'' ಎಂದು ಹೇಳಿದ್ದರು.
ಟಿಕೆಟ್ ವಿಚಾರವಾಗಿ ಶುಕ್ರವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಸಚಿವ ಕೆ.ಹೆಚ್. ಮುನಿಯಪ್ಪ, ''ಸಿಎಂ ಸಿದ್ದರಾಮಯ್ಯ ಅವರು ರಿಸಲ್ಟ್ ಓರಿಯಂಟೆಡ್ ಅಭ್ಯರ್ಥಿಯ ಆಯ್ಕೆ ಮಾಡಬೇಕು. ಈಗಲೂ ಕಾಲ ಮಿಂಚಿಲ್ಲ. ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದರೆ, ಎಲ್ಲರೂ ಸೇರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ" ಎಂದಿದ್ದಾರೆ.