ಹಾಸನ/ ಮೈಸೂರು: ಮಹಿಳೆಯೊಬ್ಬರು ಅಪಹರಣವಾಗಿದ್ದಾರೆ ಎಂದು ಆರೋಪಿಸಿ ಮೈಸೂರಿನ ಕೆ.ಆರ್. ನಗರ ಠಾಣೆಯಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ಮಹಿಳೆಯ ಪುತ್ರ ಗುರುವಾರ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ತಡರಾತ್ರಿ ಎಫ್‌ಐಆರ್ ದಾಖಲಾಗಿದೆ. ಮೈಸೂರು ಹೆಚ್ಚುವರಿ ಪೊಲೀಸ್ ಆಯುಕ್ತರಾದ ನಂದಿನಿ ಠಾಣೆಗೆ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ.
’’ಪೆನ್ಡ್ರೈವ್ ವಿವಾದದಲ್ಲಿ ತನ್ನ ತಾಯಿಯ ಚಿತ್ರವೂ ಇದೆ. ವಿಡಿಯೋ ಬಹಿರಂಗದ ಬಳಿಕ ಸತೀಶ್ ಬಾಬು ಎಂಬುವರು ರೇವಣ್ಣ ಕರೆಯುತ್ತಿದ್ದಾರೆ ಎಂದು ಅವರನ್ನು ಕರೆದೊಯ್ದಿದ್ದಾರೆ. ಆಗಿನಿಂದ ಅವರು ನಾಪತ್ತೆಯಾಗಿದ್ದಾರೆ‘‘ ಎಂದು, ಹುಡುಕಿಕೊಡುವಂತೆಯೂ ದೂರಿನಲ್ಲಿ ತಿಳಿಸಲಾಗಿದೆ. ಈ ದೂರಿನನ್ವಯ ಹೆಚ್.ಡಿ.ರೇವಣ್ಣ ಹಾಗೂ ಸತೀಶ್ ಬಾಬು ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆ ಪುತ್ರ ನೀಡಿದ ದೂರಿನಲ್ಲಿ ಏನಿದೆ?: ''ನನ್ನ ತಾಯಿಯು ಶಾಸಕ ಹೆಚ್.ಡಿ.ರೇವಣ್ಣ ಅವರ ಮನೆ ಮತ್ತು ತೋಟದಲ್ಲಿ ಸುಮಾರು 6 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಸುಮಾರು 3 ವರ್ಷಗಳ ಹಿಂದೆಯೇ ಆ ಕೆಸಲ ಬಿಟ್ಟು ಸದ್ಯ ನಮ್ಮೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಈಗ ಲೋಕಸಭೆ ಚುನಾವಣೆ ನಡೆಯುವ ಮೂರ್ನಾಲ್ಕು ದಿನಗಳ ಮುನ್ನ ಭವಾನಿ ರೇವಣ್ಣ ಅವರು ಕರೆಯುತ್ತಾರೆ ಎಂದು ಹೇಳಿ ಹೆಬ್ಬಳುಕೊಪ್ಪಲಿನ ಸತೀಶ್ ಬಾಬಣ್ಣ ಎನ್ನುವರು ನನ್ನ ತಾಯಿಯನ್ನು ಹೊಳೆನರಸೀಪುರಕ್ಕೆ ಕರೆದೊಯ್ದರು. ಚುನಾವಣೆ ನಡೆಯುತ್ತಿರುವ ದಿನ ಮತ್ತೆ ಮತ್ತೆ ವಾಪಸ್ ಕರೆದುಕೊಂಡು ಬಂದರು.
ಈ ವೇಳೆ, ಪೊಲೀಸರು ಬಂದರೆ ಏನು ಹೇಳಬೇಡಿ, ಅಲ್ಲದೇ ಅವರಿಗೆ ಸಿಗಬೇಡಿ, ನಿಮ್ಮ ಮೇಲೆ ಕೇಸ್ ಆಗುತ್ತದೆ, ಬಂದರೆ ನನಗೆ ತಿಳಿಸಿ, ನಾನು ಬಂದು ನಿಮ್ಮನ್ನು ಕರೆದುಕೊಂಡು ಹೋಗುವೆ ಎಂದು ನನ್ನ ತಂದೆ-ತಾಯಿಗೆ ಹೇಳಿ ಅವರು ಹೊರಟು ಹೋದರು. ಇದಾದ ಬಳಿಕ ಏ. 29ರಂದು ರಾತ್ರಿ 9 ಗಂಟೆಗೆ ಮತ್ತೆ ಬಂದ ಸತೀಶ್ ಬಾಬಣ್ಣ, ಪೊಲೀಸರ ಕೈಗೆ ಸಿಕ್ಕರೆ ಕೇಸ್ ಆಗುತ್ತದೆ ಎಂದು, ರೇವಣ್ಣ ಸಾಹೇಬರು ಕರೆದುಕೊಂಡು ಬರುವುದಾಗಿ ಹೇಳಿದ್ದಾರೆ ಎಂದು ನನ್ನ ತಾಯಿಯನ್ನು ಮತ್ತೆ ಒತ್ತಾಯ ಮಾಡಿ ಕರೆದುಕೊಂಡು ಹೋದರು. ನನ್ನ ತಾಯಿಯನ್ನು ಎಲ್ಲಿಗೆ ಕರೆದೊಯ್ದು ಎಂಬುವುದು ನನಗೆ ಗೊತ್ತಿಲ್ಲ. ಆದರೆ, ಮರುದಿನ ನನ್ನ ಸ್ನೇಹಿತರು ಬಂದು ನಿನ್ನ ತಾಯಿಯೊಂದು ವಿಡಿಯೋ ಬಂದಿದೆ ಎಂದು ತಿಳಿಸಿದರು. ಸಂಬಂಧಿಕರು ಕೇಳತೊಡಗಿದರು. ಆಗ ತಕ್ಷಣ ನಾನು ಸತೀಶ್ ಬಾಬಣ್ಣಗೆ ಪೋನ್ ಮಾಡಿ ತನ್ನ ತಾಯಿಯನ್ನು ಕಳಿಸುವಂತೆ ಕೇಳಿಕೊಂಡೆ. ಆಗ ಬಾಬಣ್ಣ ಈ ಹಿಂದೆ ರೇವಣ್ಣ ಸಾಹೇಬರ ಮಗ ಬೇರೆಯವರ ಜೊತೆ ಗಲಾಟೆ ಮಾಡಿದಾಗ ನಿಮ್ಮ ಅಮ್ಮನೂ ಸಹ ದೊಣ್ಣೆ ಹಿಡಿದುಕೊಂಡು ನಿಂತಿರುವ ಫೋಟೋ ಬಂದಿದೆ, ಅದಕ್ಕೆ ಎಫ್‌ಐಆರ್ ಆಗಿದೆ, ಇನ್ನು ಬೇಲು ತಂದು ಬಿಡಿಸಿಕೊಂಡು ಬರಬೇಕೆಂದು ಹೇಳಿದರು. ಅಲ್ಲದೇ ಈ ಬಗ್ಗೆ ನಿನ್ನ ಫೋನ್ನಲ್ಲಿ ಮಾತನಾಡಬೇಡ, ಬೇರೆಯವರ ಫೋನ್ನಲ್ಲಿ ಮಾತನಾಡು ಎಂದು ಸಹ ಹೇಳಿದರು. ಸದ್ಯ ನನ್ನ ತಾಯಿ ಪೊಲೀಸರ ಕೈಗೆ ಸಿಗಬಾರದು ಎಂಬ ಸತೀಶ್ ಬಾಬಣ್ಣ ನಮ್ಮ ಮನೆಗೆ ಬಂದು ಅವರನ್ನು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಎಲ್ಲಿಯೋ ಬಚ್ಚಿಟ್ಟಿದ್ದಾರೆ. ಹಾಗಾಗಿ ನನ್ನ ತಾಯಿಯ ಜೀವಕ್ಕೆ ತೊಂದರೆ ಇದೆ. ಆದ್ದರಿಂದ ತನ್ನ ತಾಯಿಯನ್ನು ಒತ್ತಾಯ ಮಾಡಿ ಕರೆದೊಯ್ದ ಸತೀಶ್ ಬಾಬಣ್ಣ ಮತ್ತು ಕರೆತರುವಂತೆ ಹೇಳಿದ ರೇವಣ್ಣ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಜೊತೆಗೆ ನನ್ನ ತಾಯಿಯನ್ನು ಹುಡುಕಿಕೊಡಿ'' ಅವರು ದೂರಿನಲ್ಲಿ ತಿಳಿಸಿದ್ದಾರೆ.