ಬೆಂಗಳೂರು : ದಿ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಿದ್ದ ಪ್ರಕರಣದ ಆರೋಪಿಗಳಾಗಿರುವ ಅಬ್ದುಲ್ ಮತೀನ್ ಅಹ್ಮದ್ ತಾಹಾ ಹಾಗೂ ಮಸ್ಸಾವೀರ್ ಹುಸೇನ್ ಶಾಜಿಬ್ ವಿರುದ್ಧ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಶಿವಮೊಗ್ಗ ಮಾದರಿಯ ಐಸಿಸ್ ಸಂಚು ಪ್ರಕರಣದಲ್ಲಿಯೂ ಸಹ ಆರೋಪಿತರ ಸಂಚಿರುವುದರ ಕುರಿತು ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಈ ಮೂಲಕ ಶಿವಮೊಗ್ಗ ಮಾದರಿ ಪ್ರಕರಣದ ಆರೋಪಿಗಳ ಪಟ್ಟಿ ಹತ್ತಕ್ಕೇರಿದಂತಾಗಿದೆ.
ಬೆಂಗಳೂರಿನ ಅಲ್-ಹಿಂದ್ ಐಸಿಸ್ ಮಾದರಿ ಪ್ರಕರಣದ ಆರೋಪಿಗಳಾಗಿರುವ ಅಬ್ದುಲ್ ಮತೀನ್ ಅಹ್ಮದ್ ತಾಹಾ ಹಾಗೂ ಮಸ್ಸಾವೀರ್ ಹುಸೇನ್ ಶಾಜಿಬ್ ವಿರುದ್ಧ ಈ ಹಿಂದೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಶಿವಮೊಗ್ಗ ಜಿಲ್ಲೆಯ ಮೂಲದವರಾಗಿದ್ದ ಆರೋಪಿಗಳು ಐಸಿಸ್‌ನ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದು, ಮುಸ್ಲಿಂ ಯುವಕರನ್ನ ಐಸಿಸ್‌ನತ್ತ ಸೆಳೆಯುತ್ತಿದ್ದರು.
ಭಾರತದಲ್ಲಿ ಭಯೋತ್ಪಾದನೆ ಹರಡಲು ಮತ್ತು ಭಾರತವನ್ನ ಅಸ್ಥಿರಗೊಳಿಸುವುದರ ಭಾಗವಾಗಿ ಮುಸ್ಲಿಂ ಯುವಕರ ನೇಮಕ, ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ಭಾರತೀಯ ರಾಷ್ಟ್ರೀಯ ಧ್ವಜವನ್ನು ಸುಡುವುದು, ಪ್ರಯೋಗ ಸ್ಫೋಟಗಳು ಮತ್ತಿತರ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು. 2022ರ ಸೆಪ್ಟೆಂಬರ್ 19ರಂದು ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಸಂಚಿನ ಕುರಿತು ಪ್ರಕರಣ ದಾಖಲಾಗಿತ್ತು. ಮತ್ತು ಅದೇ ವರ್ಷ ನವೆಂಬರ್ 4ರಂದು ಎನ್ಐಎ ತನಿಖೆಯನ್ನು ವಹಿಸಿಕೊಂಡಿತ್ತು.