ಬೆಂಗಳೂರು : ವಿವಾಹಿತ ಮಹಿಳೆಯ ಸ್ನೇಹ ಬೆಳೆಸಿದ ಯುವಕ (ಆಟೋ ಚಾಲಕ)ನಿಗೆ ಆಕೆಯ ಸಹೋದರ ಹಾಗೂ ಪತಿ ಸೇರಿ ಚಾಕು ಇರಿದಿರುವ ಘಟನೆ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಪಂತರಪಾಳ್ಯದಲ್ಲಿ ನಡೆದಿದೆ. ಆಗಸ್ಟ್ 19ಎಂದು ರಾತ್ರಿ ಘಟನೆ ನಡೆದಿದ್ದು, ಹೊಸಗುಡ್ಡದಹಳ್ಳಿ ನಿವಾಸಿಯಾಗಿರುವ ಕಾರ್ತಿಕ್ (25) ಚಾಕು ಇರಿತಕ್ಕೊಳಗಾದ ಯುವಕ. ಆರೋಪಿಗಳಾದ ವಿನೋದ್, ಸತೀಶ್ ಹಾಗೂ ಸೂರ್ಯ ಕೃತ್ಯದ ಬಳಿಕ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಆಟೋ ಚಾಲಕ ವೃತ್ತಿ ಮಾಡಿಕೊಂಡಿದ್ದ ಕಾರ್ತಿಕ್ ವಿವಾಹಿತ ಮಹಿಳೆಯೊಬ್ಬರ ಹಿಂದೆ ಬಿದ್ದಿದ್ದ. ಆಗಾಗ್ಗೆ ಭೇಟಿಯಾಗಲು ಹೋಗುತ್ತಿದ್ದುದನ್ನ ತಿಳಿದ ಮಹಿಳೆಯ ಪತಿ ಸತೀಶ್ ಹಾಗೂ ಸಹೋದರ ವಿನೋದ್ ಮೂರ್ನಾಲ್ಕು ಬಾರಿ ಕಾರ್ತಿಕ್'ಗೆ ಎಚ್ಚರಿಕೆ ಸಹ ನೀಡಿದ್ದರು. ಆದರೂ ಸಹ ಮತ್ತೆ ಮಹಿಳೆಯ ಜೊತೆ ಸ್ನೇಹ ಮುಂದುವರೆಸಿದ್ದ ಕಾರ್ತಿಕ್, ಸೋಮವಾರ ರಾತ್ರಿ 11ರ ಸುಮಾರಿಗೆ ಮಹಿಳೆಯೊಂದಿಗೆ ಮಾತನಾಡಲು ಪಂತರಪಾಳ್ಯಕ್ಕೆ ಹೋಗಿದ್ದ. ಈ ವೇಳೆ ಬಂದಿದ್ದ ಆರೋಪಿಗಳಾ ವಿನೋದ್, ಸತೀಶ್ ಹಾಗೂ ಆತನ ಸ್ನೇಹಿತ ಸೂರ್ಯ ಸೇರಿಕೊಂಡು ಕಾರ್ತಿಕ್ ತಲೆ ಮತ್ತು ಹೊಟ್ಟೆಗೆ ಚಾಕು ಇರಿದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕಾರ್ತಿಕ್, ನಂತರ ಕುಟುಂಬದವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾರ್ತಿಕ್ ಸಹೋದರ ನೀಡಿರುವ ದೂರಿನನ್ವಯ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜೈಲಿನಲ್ಲಿ ಗಾಂಜಾ, ಗನ್ ಪೂರೈಕೆ ಆರೋಪ : ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - Ganja And Guns in Jail