ಬೆಳಗಾವಿ: ಜ.22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮತ್ತೊಂದೆಡೆ, ಕುಂದಾನಗರಿ ಬೆಳಗಾವಿಯಲ್ಲಿ ಕಲಾವಿದ ಕೈಯಲ್ಲಿ ಅರಳಿರುವ ರಾಮಮಂದಿರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಬೆಳಗಾವಿ ಶ್ರೀನಗರದ ವಂಟಮೂರಿ ಕಾಲೋನಿ ಕಲಾವಿದ ಮಲ್ಲಿಕಾರ್ಜುನ ಎಸ್. ಧೂಳಿ ಎಂಬುವರು ರಾಮಮಂದಿರ ಪ್ರತಿಕೃತಿ ನಿರ್ಮಾಣ ಮಾಡಿದ್ದಾರೆ. ಕೇವಲ 10 ರಿಂದ 12 ದಿನಗಳಲ್ಲಿ ಥರ್ಮಾಕೋಲ್ ಬಳಸಿ ಮಂದಿರದ ಪ್ರತಿಕೃತಿ ಮಾಡಿದ್ದಾರೆ.
ಶ್ರೀರಾಮನ ಮಂದಿರ 12.5 ಅಡಿ ಉದ್ದ, 8 ಅಡಿ ಅಗಲ ಹಾಗೂ 7.5 ಅಡಿ ಎತ್ತರವಿದ್ದು, ಅಯೋಧ್ಯೆಯಲ್ಲಿನ ಶ್ರೀರಾಮನ ಮಂದಿರ ಹೋಲುವಂತೆ ತಯಾರಿಸಲಾಗಿದೆ. ರಾಮಮಂದಿರಲ್ಲಿ ಪ್ರವೇಶ ದ್ವಾರ, ಗರ್ಭಗುಡಿ, 350 ಕಂಬಗಳು, 21 ಗೋಪುರಗಳು, ಮೂರು ಮಹಡಿಗಳನ್ನು ಹೊಂದಿದೆ. ಇದಕ್ಕಾಗಿ 1 ಕ್ಯೂಬಿಕ್ ಥರ್ಮಾಕೋಲ್ ಬಳಕೆ ಮಾಡಲಾಗಿದ್ದು, ಸುಮಾರು 20 ಸಾವಿರ ರೂ. ಖರ್ಚಾಗಿದೆ. ಈ ರಾಮಮಂದಿರದ ನಿರ್ಮಾಣಕ್ಕೆ ಇಂಟರ್ನೆಟ್ ನಲ್ಲಿ ಮಾಹಿತಿ ಸಂಗ್ರಹ ಮಾಡಲಾಗಿದೆ. ಅಂತರ್ಜಾಲದಲ್ಲಿ ಫೋಟೋ, ವಿಡಿಯೋವನ್ನು ವೀಕ್ಷಿಸಿ ವಿವರವಾಗಿ ಅಧ್ಯಯನ ಮಾಡಿ ನಿರ್ಮಿಸಲಾಗಿದೆ.
ಈಟಿವಿ ಭಾರತ್ ಜೊತೆಗೆ ಮಾತನಾಡಿದ ಕಲಾವಿದ ಮಲ್ಲಿಕಾರ್ಜುನ ಧೂಳಿ, ಶಾಹಪುರ ಕೋರೆ ಗಲ್ಲಿಯ ಹನುಮಾನ ತಾಲೀಮ ಯುವಕ ಮಂಡಳಿಯವರು ಆರ್ಡರ್ ಕೊಟ್ಟಿದ್ದರು. 22ರಂದು ಲಕ್ಷ ದಿಪೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಅಲ್ಲಿ ಇದನ್ನು ಪ್ರದರ್ಶನಕ್ಕಿಡಲಿದ್ದಾರೆ. ನನ್ನ ಮಕ್ಕಳಾದ ಪ್ರಜ್ವಲ್ ಮತ್ತು ಕುಬೇರ ನನಗೆ ಸಹಾಯ ಮಾಡಿದ್ದಾರೆ. ಇದೊಂದು ಪುಣ್ಯದ ಕೆಲಸ ಎಂದು ಭಾವಿಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಪತ್ನಿ ಜ್ಯೋತಿ ಧೂಳಿ ಮಾತನಾಡಿ, ನಮ್ಮ ಯಜಮಾನರಿಗೆ ಈ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿಯಾಗುತ್ತಿದೆ. 35 ವರ್ಷಗಳಿಂದ ಕಲಾವಿದರಾಗಿದ್ದು, ಯಾವುದೇ ಮೂರ್ತಿ ತಯಾರಿಸಲು ತುಂಬಾ ಶ್ರಮಿಸುತ್ತಾರೆ. ಮೋದಿಯವರ ಕಾಲದಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಲಾವಿದನ ಕುಂಚದಲ್ಲಿ ಅರಳಿದ ಶ್ರೀರಾಮ(ಶಿವಮೊಗ್ಗ): ಚಿತ್ರ ಕಲಾವಿದರೊಬ್ಬರು ಶಿವಮೊಗ್ಗದ ವಿವಿಧ ಮನೆಯ ಗೋಡೆಗಳ ಮೇಲೆ ಅಂದವಾಗಿ ಶ್ರೀರಾಮ ಮಂದಿರ, ಶ್ರೀರಾಮ ಹನುಮನ ಚಿತ್ರ ಬಿಡಿಸುವದರೊಂದಿಗೆ ಎಲ್ಲರ ಗಮನ ಸೆಳೆದಿದ್ದರು. ಕಲಾವಿದ ಫುಟ್ಬಾಲ್ ರಾಮಣ್ಣ ತಮ್ಮ ಕೈಯಾರ, ಕುಂಚದಲ್ಲಿ ಗೋಡೆಗಳ ಮೇಲೆ ಶ್ರೀರಾಮ ಮಂದಿರ, ಶ್ರೀರಾಮ ಜೊತೆಗಿರುವ ಹನುಮನ ಚಿತ್ರಗಳು, ಶ್ರೀರಾಮನು ತನ್ನ ಕಪಿ ಸೇನೆಯ ಜೊತೆ ಲಂಕಾಕ್ಕೆ ಸೇತುವೆ ಕಟ್ಟುತ್ತಿರುವುದು ಹಾಗೂ ವಿವಿಧ ಬಗೆಯ ಚಿತ್ರಗಳನ್ನು ಸುಂದರವಾಗಿ ಬಿಡಿಸಿ ಜನರ ಗಮನ ಸೆಳೆದಿದ್ದರು. ಶಿವಮೊಗ್ಗದ ಹೊಸ ತೀರ್ಥಹಳ್ಳಿ ರಸ್ತೆಯ ಪಿಯರ್ ಲೈಟ್ ಬಳಿ ವಾಸವಿರುವ ರಾಮಣ್ಣನವರು ತಮ್ಮ ಮನೆಯ ಮುಂದೆ ಇರುವ ಆಂಜನೇಯ ದೇವಾಲಯದ ಪಕ್ಕದ ಗೋಡೆಯ ಮೇಲೆ ಶ್ರೀರಾಮ ರಾಮಮಂದಿರದ ಚಿತ್ರವನ್ನು ಅದ್ಬುತವಾಗಿ ಚಿತ್ರಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೈಯಲ್ಲಿ ಅರಳಿದ ಅಯೋಧ್ಯೆ ರಾಮಮಂದಿರ