ಮಂಗಳೂರು: ಐಸಿಸ್ ನಂಟು ಹೊಂದಿರುವ ಶಂಕೆಯಲ್ಲಿ ರಾಷ್ಟ್ರೀಯ ತನಿಖಾ ಎನ್ಐಎಯಿಂದ ಬಂಧನಕ್ಕೊಳಗಿದ್ದ ಆರೋಪಿ ಅಮ್ಮರ್ ಅಬ್ದುಲ್ ರೆಹಮಾನ್ ಗೆ ಇತ್ತೀಚೆಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದು, ಇದೀಗ ಆತ ಮಂಗಳೂರಿಗೆ ಆಗಮಿಸಿದ್ದಾನೆ.
ಉಳ್ಳಾಲದ ಮಾಜಿ ಶಾಸಕ ಇದಿನಬ್ಬನವರ ಮೊಮ್ಮಗನಾದ ಅಮ್ಮರ್ ಅಬ್ದುಲ್ ರೆಹಮಾನ್ಗೆ ಇತ್ತೀಚೆಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದ್ದರಿಂದ ಆತ ತನ್ನ ಮನೆಗೆ ಆಗಮಿಸಲು ಮಂಗಳೂರಿಗೆ ಬಂದಿದ್ದಾನೆ. ವಿಮಾನದಲ್ಲಿ ಬಂದಿಳಿದ ಆತನನ್ನು ಕುಟುಂಬಸ್ಥರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
2021ರ ಆಗಸ್ಟ್ 21ರಂದು ಐಸಿಸ್ ಉಗ್ರ ಸಂಘಟನೆ ನಂಟಿನ ಆರೋಪದಡಿ ಅಮ್ಮರ್ ಅಬ್ದುಲ್ ರೆಹಮಾನ್ ಬಂಧನಕ್ಕೊಳಗಾಗಿದ್ದ. ಈತನನ್ನು ಯುಎಪಿಎ ಕಾಯ್ದೆಯಲ್ಲಿ ಎನ್ ಐ ಎ ಬಂಧಿಸಿತ್ತು. ತನ್ನ ಬಂಧನವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಸುದೀರ್ಘ ವಿಚಾರಣೆ ಬಳಿಕ ಸಾಕ್ಷ್ಯಾಧಾರದ ಕೊರತೆಯಲ್ಲಿ ದೆಹಲಿ ಹೈಕೋರ್ಟ್ ಆತನಿಗೆ ಜಾಮೀನು ಮಂಜೂರು ಮಾಡಿದೆ.
ಏನಿದು ಪ್ರಕರಣ?: ಕೆಲ ವರ್ಷಗಳ ಹಿಂದೆ ಐಸಿಸ್ ಬಗ್ಗೆ ಕೇರಳ ಮೂಲದ ಮೊಹಮ್ಮದ್ ಅಮೀನ್ ಎಂಬಾತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿತ್ತು. ಅಂತೆಯೇ, ಈತನ ವಿರುದ್ಧ 2021ರ ಮಾರ್ಚ್ 5ರಂದು ಎನ್ಐಎ ಸುಮೊಟೋ ಪ್ರಕರಣ ದಾಖಲಿಸಿತ್ತು. ವಿಚಾರಣೆಯ ವೇಳೆ ಮೊಹಮ್ಮದ್ ಅಮೀನ್ ಭಯೋತ್ಪಾದಕ ಚಟುವಟಿಕೆ ನಡೆಸುವುದರ ಜೊತೆಗೆ ಹಣ ಸಂಗ್ರಹ ಚಟುವಟಿಕೆಗಳಲ್ಲಿ ತೊಡಗಿರುವುದು ತಿಳಿದು ಬಂದಿತ್ತು.
ಈ ಹಿನ್ನೆಲೆಯಲ್ಲಿ ಆಗಸ್ಟ್ 21ರಂದು ಮೊಹಮ್ಮದ್ ಅಮೀನ್ ಸಂಪರ್ಕದಲ್ಲಿದ್ದವರ ಮನೆಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು, ಮಂಗಳೂರು ಹಾಗೂ ಜಮ್ಮು - ಕಾಶ್ಮೀರದ ಮೂರು ಸ್ಥಳಗಳಲ್ಲಿ ಶೋಧ ನಡೆಸಿದ್ದರು. ಈ ವೇಳೆ ಅಮ್ಮರ್ ಅಬ್ದುಲ್ ರೆಹಮಾನ್ ಮನೆ ಮೇಲೂ ದಾಳಿ ಮಾಡಿ, ಆತನನ್ನು ಬಂಧಿಸಿದ್ದರು.
ಇದನ್ನೂ ಓದಿ: ಐಸಿಸ್ ನಂಟು: ಉಳ್ಳಾಲ ಮಾಜಿ ಶಾಸಕ ಬಿಎಂ ಇದಿನಬ್ಬ ಮೊಮ್ಮಗ ಸೇರಿ ನಾಲ್ವರ ಬಂಧನ