ಚಾಮರಾಜನಗರ: "ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಬ್ಬ ಗೂಂಡಾ, ರೌಡಿ. ಕೊಲೆ ಆರೋಪದಲ್ಲಿ ಗುಜರಾತ್ನಲ್ಲಿ ಗಡಿಪಾರು ಕೂಡ ಆಗಿದ್ದರು. ಅಂಥವರನ್ನು ಪಕ್ಕದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆಸುತ್ತಿದ್ದಾರೆ" ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಹಾಗೂ ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಗುರುವಾರ ಲೋಕಸಭಾ ಚುನಾವಣೆ ಸಂಬಂಧ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
"ಅಮಿತ್ ಶಾ ವಿರುದ್ಧ ಕೊಲೆ ಆರೋಪಗಳಿವೆ. ಬಿಜೆಪಿ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಇಂಥವರ ಕೈಯಲ್ಲಿ ಅಧಿಕಾರ ಸಿಕ್ಕರೆ ದೇಶದ ಸ್ಥಿತಿ ಏನಾಗುತ್ತದೆ ಎಂಬುದನ್ನು ಈ 10 ವರ್ಷಗಳಲ್ಲಿ ನೋಡಿದ್ದೇವೆ" ಎಂದರು.
"2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಯಾರಿಗೆ ಕೆಲಸ ಸಿಕ್ತು?, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು ಕೇಂದ್ರ ಸರ್ಕಾರದ ಹೊಣೆಯಲ್ಲ ಅಂತ ಈಗ ಹೇಳ್ತಾರೆ. ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಮೋದಿ ಭರವಸೆ ನೀಡಿದ್ದರು. ಕನಿಷ್ಠ ಪಕ್ಷ ಸ್ವಿಸ್ ಬ್ಯಾಂಕ್‌ನಲ್ಲಿ ಯಾರದೆಲ್ಲಾ ಖಾತೆ ಇದೆ ಅಂತ ಪಟ್ಟಿ ಕೂಡ ರಿಲೀಸ್ ಮಾಡಲಿಲ್ಲ. ಇನ್ನು ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರಗಳೂ ಹೆಚ್ಚಾಗಿವೆ" ಎಂದು ಕೇಂದ್ರದ ವಿರುದ್ಧ ಟೀಕಾಸಮರ ನಡೆಸಿದರು.
ಇದನ್ನೂ ಓದಿ: ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಮುರುಘಾಮಠ ಸ್ವಾಮೀಜಿ ಸ್ಪಷ್ಟನೆ - Muruga Mutt Swamiji
"400ಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ ಅಂತಾ ಹೇಳ್ತಾರೆ. ಒಂದು ವೇಳೆ 400ಕ್ಕೂ ಹೆಚ್ಚು ಸ್ಥಾನ ಬಂದ್ರೆ ಸಂವಿಧಾನ ಬದಲಾವಣೆ ಮಾಡೋದು ಇವರ ಹಿಡನ್ ಅಜೆಂಡಾ. ದೇಶದ ಇತಿಹಾಸದಲ್ಲೇ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸರ್ಕಾರ ಅಂದ್ರೆ ಅದು ಮೋದಿ ಸರ್ಕಾರ" ಎಂದು ತೀವ್ರ ವಾಗ್ದಾಳಿ ನಡೆಸಿದರು.
ಸಚಿವರಾದ ಹೆಚ್.ವೆಂಕಟೇಶ್, ಹೆಚ್.ಸಿ.ಮಹಾದೇವಪ್ಪ ಹಾಗು ಕ್ಷೇತ್ರದ ಅಭ್ಯರ್ಥಿ ಸುನೀಲ್ ಬೋಸ್ ಸೇರಿದಂತೆ ಹಲವರು ಈ ಚುನಾವಣಾ ಸಭೆಯಲ್ಲಿದ್ದರು.
ಇದನ್ನೂ ಓದಿ: ಬಾಗಲಕೋಟೆ ಟಿಕೆಟ್ ಬದಲಾವಣೆ ಅಸಾಧ್ಯವೆಂದ ಸಿಎಂ ಸಿದ್ದರಾಮಯ್ಯ; ವೀಣಾ ಕಾಶಪ್ಪನವರ್‌ಗೆ ನಿರಾಶೆ - Veena Kashappanavar