ಶಿವಮೊಗ್ಗ: ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಳಗ್ಗೆ ಕರೆ ಮಾಡಿ ಚುನಾವಣೆಯಿಂದ ಹಿಂದಕ್ಕೆ ಸರಿಯುವುಂತೆ ಹೇಳಿದರು. ನಾನು ಅವರ ಮುಂದೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದು ನಾಳೆ ದೆಹಲಿಗೆ ಬರುವಂತೆ ಸೂಚಿಸಿರುವುದಾಗಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಇಂದು ಚುನಾವಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ''ಶಾ ಅವರು ಇಂದು ಬೆಳಗ್ಗೆ ದೂರವಾಣಿ ಕರೆ ಮಾಡಿದ್ದರು. ಪಕ್ಷದ ಹಿರಿಯರಿದ್ದೀರಿ, ನೀವು ಸ್ಪರ್ಧೆ ಮಾಡುವುದು ಆಶ್ಚರ್ಯ ತಂದಿದೆ ಎಂದರು. ಅದಕ್ಕೆ ಸ್ಪಷ್ಟವಾಗಿ ಹೇಳಿದ್ದೇನೆ. ಒಂದು ಕುಟುಂಬದ ಕೈಯಲ್ಲಿ ಪಕ್ಷವಿದೆ. ಅದನ್ನು ಮುಕ್ತಿಗೊಳಿಸಬೇಕೆಂದು ಮೋದಿ ಅವರು ಯಾವ ಅಪೇಕ್ಷೆ ವ್ಯಕ್ತಪಡಿಸಿದ್ದಾರೋ ಅದಕ್ಕೆ ವಿರುದ್ಧವಾದಂತ ರೀತಿ ನಮ್ಮ ರಾಜ್ಯದಲ್ಲಿ ಕೂಡ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬೆಳೆಯುತ್ತಿದೆ. ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷ ಹೋಗಿರುವುದು ತುಂಬಾ ಅನ್ಯಾಯ. ಇದರಿಂದ ಕಾರ್ಯಕರ್ತರಿಗೆ ನೋವಾಗಿದೆ. ಅಪ್ಪ ಮಕ್ಕಳ ವಿರುದ್ಧ ಒಂದು ಪಕ್ಷದ ವ್ಯವಸ್ಥೆಯನ್ನು ಮುಕ್ತಿಗೊಳಿಸಬೇಕು. ಪಕ್ಷವನ್ನು ಕಟ್ಟಿದವರು ಮತ್ತು ಕಟ್ಟದೇ ಇರುವವರಿಗೆ ಸಮಾಧಾನ ಆಗಬೇಕು ಮತ್ತು ಹಿಂದುತ್ವದ ಪರವಾಗಿ ಹೋರಾಟ ಮಾಡುತ್ತಿರುವುದು ತಪ್ಪಾ ಅಂತಾ ಕಲ್ಪನೆ ಮೂಡಿದೆ. ಹಿಂದುತ್ವಕ್ಕೆ ಸರಿಯಾದ ಬೆಲೆ ಸಿಗಬೇಕು ಎಂಬ ಉದ್ದೇಶ ಹಾಗೂ ಹಿಂದುಳಿದವರಿಗೆ ಟಿಕೆಟ್ ಕೊಡುವುದಕ್ಕೆ ಆಗುತ್ತಿಲ್ಲ. ಹಿಂದುಳಿದವರಿಗೆ ಏಕೆ ಮೋಸ ಮಾಡುತ್ತಿದ್ದೀರಿ ಎಂಬ ಮಾತು ಸಹ ನಾನು ಅಮಿತ್ ಶಾ ಅವರಿಗೆ ಹೇಳಿದ್ದೇನೆ. ಹಿಂದುಳಿದವರ ಬಗ್ಗೆ, ದಲಿತರ ಬಗ್ಗೆ ಮತ್ತು ಪಕ್ಷದಲ್ಲಿ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂಬ ಉದ್ದೇಶದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಅಂತಾ ಅವರಿಗೆ ಹೇಳಿದ್ದೇನೆ'' ಎಂದು ಈಶ್ವರಪ್ಪ ಹೇಳಿದರು.
ಇದಕ್ಕೆ ಶಾ, ನೀವು ಚುನಾವಣೆಗೆ ಸ್ಪರ್ಧಿಸಬೇಡಿ. ಅವುಗಳನ್ನು ಮುಂದೆ ಮಾಡೋಣ ಅಂತಾ ಹೇಳಿದ್ದಾರೆ. ಆದರೆ, ನಾನು ದೆಹಲಿಗೆ ಬಂದಾಗ ನನಗೆ ಚುನಾವಣೆಯಿಂದ ವಾಪಸ್ ತೆಗೆಯುವಂತೆ ಹೇಳುವಂತಿಲ್ಲ ಎಂದು ಹೇಳಿದ್ದೇನೆ. ಮಗನ ವಿಷಯ ಕೂಡ ಪ್ರಸ್ತಾಪಿಸಿದರು. ಅದಕ್ಕೆ ನಾನು ನನ್ನ ಮಗನ ಜೊತೆ ಮಾತನಾಡಿರುವೆ. ನಾಳೆನೇ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ. ನಾನು ದೆಹಲಿಗೆ ದೊಡ್ಡವರು ಕರೆದಾಗ ಹೋಗದೆ ಇರುವುದಕ್ಕೆ ಆಗೋದಿಲ್ಲ. ನನಗೆ ನೊಂದ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ. ಹಲವರು ಕಾಂಗ್ರೆಸ್ನವರು ಅಲ್ಲಿ ಓಡಾಟ ಮಾಡುತ್ತಿದ್ದಾರೆ. ಅವರು ನನಗೆ ಮತ ನೀಡುತ್ತೇನೆ ಎಂದು ಹೇಳಿದ್ದಾರೆ. ಪ್ರವಾಸದಿಂದ ನನಗೆ ಗೆಲ್ಲುವ ವಿಶ್ವಾಸವಿದೆ ಎಂದು ಈಶ್ವರಪ್ಪ ಹೇಳಿದ್ರು.
ಸಂಸದ ರಾಘವೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಾನು ಮನೆಯಲ್ಲಿ ಪ್ರತಿನಿತ್ಯ ಪೂಜೆ ನಡೆಸುತ್ತೇನೆ. ಘಂಟೆ ಭಾರಿಸುತ್ತೇನೆ. ದೇವಾಲಯದಲ್ಲಿ ಘಂಟೆ ಭಾರಿಸಿಲ್ಲ. ಅದಕ್ಕೆ ನಾನು ನೀನಲ್ಲ ನಿಮ್ಮಪ್ಪ ಯಡಿಯೂರಪ್ಪನವರನ್ನು ಕಳುಹಿಸಿ ಎಂದು ಹೇಳಿದ್ದೆ. ಒಂದು ವೇಳೆ ಯಡಿಯೂರಪ್ಪ ಘಂಟೆ ಭಾರಿಸಿಯೇ ಬಿಡುತ್ತಾರೆ. ಅವರು ಸುಳ್ಳಿನ ಸರದಾರ. ಯಡಿಯೂರಪ್ಪ ಕುಟುಂಬ ಚೆನ್ನಾಗಿರಲಿ, ಆದರೆ ಚುನಾವಣೆಯಲ್ಲಿ ಸೋಲಿಲಿ ಎಂದರು. ಯಡಿಯೂರಪ್ಪ ಮತ್ತು ಅವರ ಮಕ್ಕಳು ಈ ಸಮಸ್ಯೆ ಇಲ್ಲೇ ಬಗೆಹರಿಯುತ್ತದೆ ಎಂದುಕೊಂಡಿದ್ದರು. ಇದರಿಂದ ಶಾ ಈಗ ಫೋನ್ ಮಾಡಿದ್ದಾರೆ. ಯಡಿಯೂರಪ್ಪ ನಮ್ಮ ಮನೆಗೆ ಬರುತ್ತೇನೆ ಎಂದರು, ಇನ್ನೂ ಬಂದಿಲ್ಲ ಅಂತಾ ಈಶ್ವರಪ್ಪ ಹೇಳಿದರು.
ರಾಯಣ್ಣ ಬ್ರಿಗೇಡ್ ಕೂಡಲ ಸಂಗಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹಿಂದುಳಿದವರು, ದಲಿತರು ಸೇರಿದಾಗ ಯಡಿಯೂರಪ್ಪನವರು ಕಣ್ಣು ಕೆಂಪಾಗಿಸಿ, ರಾಯಣ್ಣ ಬ್ರಿಗೇಡ್ ನಿಲ್ಲಿಸಬೇಕೆಂದು ಹೇಳಿದರು. ರಾಜ್ಯ ಬಿಜೆಪಿ ಶುದ್ಧೀಕರಣವಾಗಿ, ಬಿಜೆಪಿಗೆ ಪೂರ್ಣ ಬಹುಮತ ಬರುತ್ತದೆ. ಎಲ್ಲದಕ್ಕೂ ಶುಭ ಘಳಿಗೆ ಬರಬೇಕು ಎಂದರು.
ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಸಿದ್ದರಾಮಯ್ಯ ಬರಿ ಬೊಗಳೆ ಬಿಡುತ್ತಾರೆ. ಈಗಾಗಲೇ ಅವರ ಸೀಟು ಅಲ್ಲಾಡಿ ಹೋಗಿದೆ. ರಾಜ್ಯದ ಜನತೆಗೆ ಮೋದಿ ನೋಡಿ ಮತ ಹಾಕುತ್ತಾರೆ. ಚುನಾವಣೆ ಆದ ಮೇಲೆ ಯಡಿಯೂರಪ್ಪ, ಸಿದ್ದರಾಮಯ್ಯ ಏನೂ, ಮೋದಿ ಏನೂ ಹಾಗೂ ಪಕ್ಷದ ಉಳಿವಿಗಾಗಿ ಈಶ್ವರಪ್ಪ ಮಾಡುತ್ತಿರುವ ಹೋರಾಟ ಏನೂ ಎಂದು ತಿಳಿದು ಬರುತ್ತದೆ. ಹಿಂದೆ ರಾಜ್ಯದಿಂದ ನಾವೆಲ್ಲಾ ಒಂದು ಪಟ್ಟಿ ತೆಗೆದುಕೊಂಡು ಹೋದ್ರೆ, ಅದಕ್ಕೆ ಬೇಗ ಒಪ್ಪಿಗೆ ತೆಗೆದುಕೊಂಡು ಬರುತ್ತಿದ್ದೆವು. ಈಗ ಒಂದು ಪಟ್ಟಿಗೆ ತಿರುಗಾಟ ನಡೆಸಬೇಕಿದೆ ಎಂದರು.
ಓದಿ: ಮಗನಿಗೆ ಚುನಾವಣಾ ಆಯೋಗದಿಂದ ಬಂದ ನೋಟಿಸ್ಗೆ ಉತ್ತರ ಕೊಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ - CM Siddaramaiah