ದಾವಣಗೆರೆ: ಕಳೆದ ನಾಲ್ಕು ತಿಂಗಳಿಂದ ಆಂಬ್ಯುಲೆನ್ಸ್ ಸಿಬ್ಬಂದಿ ವೇತನ ನೀಡಿಲ್ಲ. ವೇತನಕ್ಕಾಗಿ ಪರದಾಡುತ್ತಿದ್ದು, ಇಡೀ ನೌಕರರ ವರ್ಗ ತಮ್ಮ ಜೀವನ ನಡೆಸುವುದೇ ಕಷ್ಟಕರವಾಗಿದೆ. ಆದಷ್ಟು ಬೇಗ ವೇತನ ಕೊಡಿ, ಇಲ್ಲದಿದ್ದರೆ ಆರೋಗ್ಯ ಕವಚ 108 ಆಂಬ್ಯುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ನೌಕರರ ಸಂಘ ಸರ್ಕಾರಕ್ಕೆ ಗಡವು ನೀಡಿದೆ.
''ರೋಗಿಗಳಿಗೆ ಆರೋಗ್ಯ ಸಂಜೀವಿನಿಯಾಗಿರುವ ಆಂಬ್ಯುಲೆನ್ಸ್ ಸಿಬ್ಬಂದಿಗೆ ರಾಜ್ಯಾದಂತ್ಯ ನಾಲ್ಕು ತಿಂಗಳಿನಿಂದ ವೇತನ ಇಲ್ಲದಂತಾಗಿದೆ. ಸಿಬ್ಬಂದಿ ವೇತನ ಇಲ್ಲದೇ ಜಿವಿಕೆ ಸಂಸ್ಥೆಗೆ ದಿನನಿತ್ಯ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆರೋಗ್ಯ ಇಲಾಖೆ ಜಿವಿಕೆ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಜಿವಿಕೆ ಸಂಸ್ಥೆಯಡಿಯಲ್ಲಿ ಸರಿಸುಮಾರು ಇಡೀ ರಾಜ್ಯದಲ್ಲಿ ಒಟ್ಟು 7500 ಆಂಬ್ಯುಲೆನ್ಸ್ಗಳಲ್ಲಿ 3500ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ದುರಂತವೆಂದರೆ ರಾಜ್ಯ ಸರ್ಕಾರ 4 ತಿಂಗಳಿನಿಂದ ವೇತನವನ್ನೇ ನೀಡಿಲ್ಲ''.
ವೇತನ ನೀಡದಿದ್ದರೆ ಎಲ್ಲ ಸಿಬ್ಬಂದಿ ಸಾಮೂಹಿಕ ರಜೆ ತೆಗೆದುಕೊಳ್ಳುವ ಮೂಲಕ ಸೇವೆ ಸ್ಥಗಿತಗೊಳಿಸುವ ನಿರ್ಧಾರ ಮಾಡಿದ್ದೇವೆ. ವೇತನಕ್ಕಾಗಿ 10 ದಿನಗಳ ಕಾಲ ಸರ್ಕಾರಕ್ಕೆ ಗಡವು ನೀಡಲಾಗಿದೆ. ಈ ಅವಧಿಯಲ್ಲಿ ವೇತನ ನೀಡದಿದ್ದರೆ ಏ.05 ಇಲ್ಲವೇ 06ಕ್ಕೆ ತಮ್ಮ ಸೇವೆ ಸ್ಥಗಿತಗೊಳಿಸಬೇಕಾಗುತ್ತದೆ'' ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ 108 ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ್. ಎಸ್ ಎಚ್ಚರಿಕೆ ನೀಡಿದ್ದಾರೆ. ''ಈ ವಿಚಾರವಾಗಿ ಆರೋಗ್ಯ ಸಚಿವರು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿರ ಗಮನಕ್ಕೆ ತರಲಾಗಿದ್ದು, ಯಾವುದೇ ಪ್ರಯೋಜನವಿಲ್ಲದಂತೆ ಆಗಿದೆ'' ಎಂದು ಸಹ ಅವರು ಆಕ್ರೋಶ ವ್ಯಕ್ತಪಡಿಸಿದರು.
ಏಪ್ರಿಲ್ 05ಕ್ಕೆ ಸ್ಥಗಿತ: 108 "ಆರೋಗ್ಯ ಕವಚ ಸೇವೆಯನ್ನು 2008ರ ನ. 01 ರಂದು ಈ ವಿನೂತನ ಯೋಜನೆ ಜಾರಿಗೆ ತಂದಿದ್ದು, ಅಂದಿನಿಂದ ಇಲ್ಲಿ ತನಕ ಸಿಬ್ಬಂದಿ ಪರಿಪಾಟಲು ಪಡುವಂತಾಗಿದೆ. ರಾಜ್ಯದಲ್ಲದೇ ದಾವಣಗೆರೆಯಲ್ಲೂ ಆರೋಗ್ಯ ಕವಚ ವಾಹನಗಳು ಸ್ಥಗಿತವಾಗಲಿವೆ" ಎಂದು ಜಿಲ್ಲಾಧ್ಯಕ್ಷ ರಮೇಶ್ ನಾಯ್ಕ್ ಬೇಸರ ವ್ಯಕ್ತಪಡಿಸಿದ್ದಾರೆ.
"2022-23-24ರ ಹೆಚ್ಚುವರಿ ವೇತನವನ್ನು ಸಹ ಸಿಬ್ಬಂದಿಗೆ ಪಾವತಿ ಮಾಡಿಲ್ಲ" ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ ರಮೇಶ್ ನಾಯ್ಕ್, "ಇಡೀ ರಾಜ್ಯದಲ್ಲಿ 7500 ಆಂಬ್ಯುಲೆನ್ಸ್ಗಳ ಪೈಕಿ 3500 ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿಂದ ಸರ್ಕಾರ ವೇತನ ನೀಡದೇ ಸತಾಯಿಸುತ್ತಿದೆ. ಜಿವಿಕೆ ಸಂಸ್ಥೆಯವರಿಗೆ ಕೇಳಿದರೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲವೆಂದು ಸಬೂಬು ಹೇಳುತ್ತಿದೆ. ಇದರಿಂದ ನಾವು ಜೀವನ ನಡೆಸುವುದೇ ಕಷ್ಟಕರವಾಗಿದೆ. ಮಕ್ಕಳ ಶಾಲೆಯ ಫೀಸ್ ಪಾವತಿ ಮಾಡಲು ಸಹ ಆಗುತ್ತಿಲ್ಲ. ಹೀಗೆ ಪರಿಸ್ಥಿತಿ ಮುಂದುವರಿದರೆ ಮುಂದಿನ ಏ.05 ಇಲ್ಲವೇ 06ಕ್ಕೆ ಸಾಮೂಹಿಕ ರಜೆಗೆ ತೆರಳಿ ಸೇವೆ ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದಾವಣಗೆರೆಯಲ್ಲೂ ಸ್ಥಗಿತ: ದಾವಣಗೆರೆಯಲ್ಲಿ ಒಟ್ಟು 19 ಆಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿದ್ದು, 107 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೂ ಕೂಡ ವೇತನ ನೀಡಿಲ್ಲ. ವೇತನ ಕೊಡಿ ಸ್ವಾಮಿ ಅಂತ ಪರಿಪರಿಯಾಗಿ ಕೇಳಿಕೊಂಡರೂ ಜಿವಿಕೆ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಜಪ್ಪಯ್ಯ ಎನ್ನುತ್ತಿಲ್ಲ ಎಂದು ಜಿಲ್ಲಾಧ್ಯಕ್ಷ ರಮೇಶ್ ನಾಯ್ಕ್ ಅಳಲು ತೋಡಿಕೊಂಡರು.
ಇದನ್ನೂ ಓದಿ: ವೇತನ ಆಯೋಗದ ಶಿಫಾರಸುಗಳಿಗೆ ಸರ್ಕಾರಿ ನೌಕರರ ಸಂಘ ಹರ್ಷ, ಯಥಾವತ್ ಜಾರಿಗೆ ಆಗ್ರಹ