ಹುಬ್ಬಳ್ಳಿ: ಮಲೇಷಿಯಾದ ಕೌಲಾಲಂಪುರದಲ್ಲಿ ಡಿ.1ರಿಂದ 8ರವರೆಗೆ ನಡೆದ ಏಷ್ಯಾ ಪೆಸಿಫಿಕ್ ಡೆಫ್ ಗೇಮ್ಸ್ ಚೆಸ್ ಪಂದ್ಯಾವಳಿಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಹುಬ್ಬಳ್ಳಿ ಮತ್ತು ಧಾರವಾಡದ ಇಬ್ಬರು ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.
ರಾಜ್ಯದಿಂದ ಕೇವಲ ಮೂವರು ಡೆಫ್ ಕ್ರೀಡಾಪಟುಗಳು ಚೆಸ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಈ ಪೈಕಿ ಧಾರವಾಡದ ಅಂಬಿಕಾ ನಾಗಪ್ಪ ಮಸಗಿ, ಹುಬ್ಬಳ್ಳಿಯ ಕಿಶನ್ ಹುಲ್ಲಲ್ಲಿ ಹಾಗೂ ಪುತ್ತೂರಿನ ಯಶಸ್ವಿ ಕುಡುಮನ್ ಆಯ್ಕೆಯಾಗಿ ಸ್ಪರ್ಧಿಸಿದ್ದರು.
ಅಂಬಿಕಾ ನಾಗಪ್ಪ ಮಸಗಿ ಅವರು ಡೆಫ್ ಚೆಸ್ ಮಹಿಳಾ ಬ್ಲಿಡ್ಜ್ (ವೈಯಕ್ತಿಕ) ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ. ರ‍್ಯಾಪಿಡ್ ಮಿಕ್ಸ್ ವಿಭಾಗದಲ್ಲೂ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಪುತ್ತೂರಿನ ಯಶಸ್ವಿ ಅವರು ಕೂಡ ಬ್ಲಿಡ್ಜ್ ( ವೈಯಕ್ತಿಕ) ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
ಮಾರ್ಚ್ 2ರಿಂದ 12ರವರೆಗೆ ಟರ್ಕಿಯ ಎರಜೋರಿಯಮ್ನಲ್ಲಿ ನಡೆದ 20ನೇ ಚಳಿಗಾಲದ ಡೆಫ್ ಒಲಿಂಪಿಕ್ಸ್ನಲ್ಲೂ ಭಾಗವಹಿಸಿದ್ದ ಮಹಿಳಾ ತಂಡ 6ನೇ ಸ್ಥಾನ ಪಡೆದುಕೊಂಡಿತ್ತು.
ಮಗಳ ಸಾಧನೆ ಬಗ್ಗೆ ಅಂಬಿಕಾ ಅವರ ತಾಯಿ ಜಯಶ್ರಿ ಮಸಗಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, ಅಂಬಿಕಾ ಬಿಇ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಪೂರ್ಣಗೊಳಿಸಿದ್ದಾಳೆ. ಇದೀಗ ಅಂತಾರಾಷ್ಟ್ರೀಯ ಡೆಫ್ ಚೆಸ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾಳೆ. ಮಗಳಿಗೆ ಮಾತನಾಡಲು ಬಾರದಿದ್ದರೂ ದೇಶವೇ ಮೆಚ್ಚುವಂಥ ಸಾಧನೆ ಮಾಡಿದ್ದಾಳೆ. ಆಕೆಯ ಸಾಧನೆ ಹೀಗೆಯೇ ಮುಂದುವರೆಯಲಿ. ಇನ್ನಷ್ಟು ಪ್ರೋತ್ಸಾಹ ದೊರೆಯುವ ಮೂಲಕ ದೇಶಕ್ಕೆ ಕೀರ್ತಿ ತರಲಿ" ಎಂದು ಖುಷಿ ಹಂಚಿಕೊಂಡರು.
ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ಕಿಶನ್ ಹುಲ್ಲಲ್ಲಿ ಮಾತನಾಡಿ, "ನಾನು ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಿದ್ದೆ. ಉತ್ತಮ ಅಂಕ ಬಂದಿದೆ. ಆದ್ರೆ ಯಾವುದೇ ಸ್ಥಾನ ಸಿಕ್ಕಿಲ್ಲ. ಆದ್ರೂ ಎದೆಗುಂದಿಲ್ಲ. ಮುಂದಿನ ಬಾರಿ ಉತ್ತಮ ಸಾಧನೆ ಮಾಡುತ್ತೇನೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚೆಸ್ ಒಲಿಂಪಿಯಾಡ್ನಲ್ಲಿ ಚಿನ್ನ ಗೆದ್ದ ಆಟಗಾರರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ - Grand welcome - GRAND WELCOME