ಬೆಂಗಳೂರು: ನಾಳೆ ಮೈಸೂರಿನಲ್ಲಿ ನಡೆಯುವ ಜನಾಂದೋಲನ ಸಮಾವೇಶದಲ್ಲಿ ಮೈತ್ರಿಪಕ್ಷಗಳು ಮಾಡಿರುವ ಭ್ರಷ್ಟಾಚಾರವನ್ನು ತೆರೆದಿಡುತ್ತೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಷಯವಿಲ್ಲದೇ ಮೈತ್ರಿಪಕ್ಷಗಳು ಪಾದಯಾತ್ರೆ ಮಾಡುತ್ತಿವೆ. ಅವರವರ ಮಧ್ಯೆ ಗಲಾಟೆ ಮಾಡಿಕೊಂಡಿದ್ದಾರೆ. ಇಷ್ಟು ದಿನ ಕಿತ್ತಾಟ ಹೊರಗೆ ಬಂದಿರಲಿಲ್ಲ, ಈಗ ಹೊರಬರುತ್ತಿದೆ. ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಪ್ರತಿಪಕ್ಷಗಳ ಭ್ರಷ್ಟಾಚಾರವನ್ನು ನಾಳೆ ನಡೆಯುವ ಸಮಾವೇಶದಲ್ಲಿ ಬಹಿರಂಗಪಡಿಸಲಾಗುವುದು ಎಂದರು.
ಪಾದಯಾತ್ರೆ ಮೈತ್ರಿಪಕ್ಷಗಳ ಕಿತ್ತಾಟಕ್ಕೆ ವೇದಿಕೆಯಾಗುತ್ತಿದೆ. ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ವಿಚಾರದಲ್ಲಿ ಕುಮಾರಸ್ವಾಮಿ ಅವರು ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ ಅಂತ ಹೇಳಿದ್ದರು. ಇದೊಂದೇ ವಿಚಾರವಲ್ಲದೇ ಅನೇಕ ವಿಚಾರಗಳಿದ್ದು, ನಾನು ಭಾಗಿಯಾಗುವುದಿಲ್ಲ ಎಂದು ಹೇಳಿದ್ದರು. ಈಗ ಬಿಜೆಪಿಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಿದ್ದಾರೆ. ನಾಳೆ ನಡೆಯುವ ಸಮಾವೇಶದಲ್ಲಿ ಅವರ ಭ್ರಷ್ಟಾಚಾರವನ್ನು ತೆರೆದಿಡುತ್ತೇವೆ ಎಂದು ತಿಳಿಸಿದರು.
ಹೆಚ್ಡಿಕೆ-ಡಿಕೆಶಿ ನಡುವೆ ಟಾಕ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರು ಬೇರೆ ರೀತಿ ಸಂಪಾದನೆ ಮಾಡಿದರೆ ಹೇಳಲಿ. ಅವರು ಕೇಂದ್ರ ಸಚಿವರಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಡಿ.ಕೆ.ಶಿವಕುಮಾರ್ ಬಗ್ಗೆ ಲಘುವಾಗಿ ಮಾತಾಡೋದೇ ಕೆಲಸವಾಗಿದೆ. ಮೊದಲು ಕೊಟ್ಟಿರುವ ದೊಡ್ಡ ಖಾತೆಯನ್ನು ನಿಭಾಯಿಸಲಿ ಎಂದರು.
ಕುಮಾರಸ್ವಾಮಿ ಮೇಲಿರುವ ಲೋಕಾಯುಕ್ತ ಪ್ರಕರಣದ ಕುರಿತು ಮಾತನಾಡಿ, ಇತ್ತೀಚೆಗೆ ಸಾಕಷ್ಟು ವಿಚಾರಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಇನ್ನೊಂದು ವಾರದಲ್ಲಿ ಬಿಜೆಪಿ ಜೆಡಿಎಸ್ ನಾಯಕರ ಹೆಸರುಗಳು ಹೊರಬರಲಿವೆ. ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಹೆಸರು ತೆಗೆಯೋದಕ್ಕೆ ನಾವು ಹೋಗಲ್ಲ. ಆಗಸ್ಟ್ 10ರ ಬಳಿಕ ಎಲ್ಲವೂ ಹೊರಬರಲಿದೆ, ಕಾಯುತ್ತಿರಿ ಎಂದು ತಿಳಿಸಿದರು.
ಇದನ್ನೂ ಓದಿ: ಕುಮಾರಸ್ವಾಮಿ ಅವರದು ಡಬಲ್ ಸ್ಟ್ಯಾಂಡ್ ರಾಜಕಾರಣ: ಸಚಿವ ಚಲುವರಾಯಸ್ವಾಮಿ - Chaluvarayaswamy