ಧಾರವಾಡ: ಧಾರವಾಡದ ಕೋಳಿಕೆರೆ ಅಭಿವೃದ್ಧಿ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಪಾಲಿಕೆ ಸದಸ್ಯ ಶಂಕರ ಶೆಳಕೆ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಮೇಲೆ ಆರೋಪ ಮಾಡಿದ ಪಾಲಿಕೆ ಸದಸ್ಯ ಶಂಕರ್ ಶೆಳಕೆ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 8ರ ಸದಸ್ಯರಾಗಿದ್ದಾರೆ. ನಗರದ ಕೋಳಿಕೆರಿ ಹೂಳೆತ್ತಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಈ ದೂರಿನ ಹಿನ್ನೆಲೆ ಕೆರೆಗೆ ಶಂಕರ್ ಶೆಳಕೆ ಭೇಟಿ ನೀಡಿ ಟೆಂಡರ್ ಆಗದೆ ಕಾಮಗಾರಿ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದರು.
ಇದಾದ ಬಳಿಕ ಮನೆಗೆ ಹೋಗುವಷ್ಟರಲ್ಲಿ ಶಿವಲೀಲಾ ಕುಲಕರ್ಣಿ ಅವರು ಕಾಲ್ ಮಾಡಿ ಮನಬಂದಂತೆ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ದೂರಿದರು. ಟೆಂಡರ್ ಇಲ್ಲದೆ ಕೆರೆ ಹೂಳೆತ್ತುವುದರ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದೆ. ಹೂಳೆತ್ತಿದ ಮಣ್ಣನ್ನು ಹೊತ್ತೊಯ್ಯುವ ವಾಹನ ಓಡಾಟದಿಂದ ನಿರಂತರ ಧೂಳು ಆಗಿ ನಮ್ಮ ವಾರ್ಡಿನ ಜನರ ಸಮಸ್ಯೆ ಆಲಿಸುವುದಕ್ಕಾಗಿ ಹೋಗಿದ್ದೆ. ಇದನ್ನು ಪ್ರಶ್ನಿಸಿದ್ದಕ್ಕೆ ಶಾಸಕರ ಪತ್ನಿ ಶಿವಲೀಲಾ ಕುಲಕರ್ಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಶಂಕರ್ ಹೇಳಿದರು.
''ನಿನಗೇನು ಕೆರೆ ಸಂಬಂಧ, ನಿನ್ನ ಮೇಲೆ ಬಹಳಷ್ಟು ದೂರುಗಳು ಬರುತ್ತಿವೆ. ನೀನು ಯಾಕೆ ಅಲ್ಲಿ ಹೋಗಿದ್ದೆ ಅಂತ ಬಾಯಿಗೆ ಬಂದ ಹಾಗೆ ಬೈದು ಕರೆ ಕಟ್ ಮಾಡಿದ್ರು. ಅಷ್ಟೇ ಅಲ್ಲ, ಅಧಿಕಾರಿಗಳು ಸಹ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ'' ಎಂದು ಶಂಕರ್ ಆರೋಪಿಸಿದರು.
ಶಿವಲೀಲಾ ಕುಲಕರ್ಣಿ ಧಮ್ಕಿ ಕೊಡಲು ಯಾರು?. ಅವರು ಜನಪ್ರತಿನಿಧಿ ಅಲ್ಲಾ. ಟೆಂಡರ್ ಆಗದೆ ಕೆಲಸ ಮಾಡುವುದೇ ತಪ್ಪು. ಕೆರೆ ಹೂಳೆತ್ತಿದ ಗೊಬ್ಬರವನ್ನು ತಮ್ಮ ಕ್ಷೇತ್ರದ ಹಳ್ಳಿಗಳಿಗೆ ಕೊಟ್ಟು ಉಚಿತ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಕ್ಷಮಾಪಣೆ ಕೇಳದಿದ್ದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಶಂಕರ್ ಎಚ್ಚರಿಸಿದರು.
ಶಿವಲೀಲಾ ಕುಲಕರ್ಣಿ ಸ್ಪಷ್ಟನೆ: ಸಾರ್ವಜನಿಕರ ಹಾಗೂ ರೈತರ ಹಿತದೃಷ್ಟಿಯಿಂದ ಧಾರವಾಡ ಪ್ರಸಿದ್ಧ ಕೋಳಿಕೆರೆಯ ಹೂಳೆತ್ತುವ ಕಾರ್ಯ ಸುಮಾರು ದಿನಗಳಿಂದ ನಡೆಯುತ್ತಿದೆ. ರೈತರು ತಮ್ಮ ಹೊಲಗಳಿಗೆ ಹೂಳೆತ್ತಿದ ಮಣ್ಣನ್ನು ತಮ್ಮ ಹೊಲಗಳಿಗೆ ಕೊಂಡೊಯ್ಯುತ್ತಿದ್ದಾರೆ. ವೈಶು ದೀಪ ಫೌಂಡೇಶನ್ ವತಿಯಿಂದ ಸ್ವಚ್ಛತೆಗೆ ಮಹತ್ವ ನೀಡಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಕೋಳಿಕೆರೆಯೂ ಒಂದಾಗಿದೆ ಎಂದು ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬಹಳ ವರ್ಷಗಳಿಂದ ಕೋಳಿ ಕೆರೆಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಸ್ವಇಚ್ಛೆಯಿಂದ ಹೂಳೆತ್ತುವ ಕಾರ್ಯ ಕೈಗೊಂಡಿದ್ದು, ಕೆಲವರಿಗೆ ಇರುಸು ಮುರುಸಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡೋಣ. ಅಭಿವೃದ್ಧಿಯನ್ನು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಮಾಡುವುದು ನನ್ನ ಗುರಿ. ಹೀಗಾಗಿ ನಾನು ಎಲ್ಲ ಪಕ್ಷದವರ ಜೊತೆ ಮಾತುಕತೆ ನಡೆಸಿ ನಾನು ಈ ಕೆಲಸ ಮಾಡುತ್ತಿದ್ದೇನೆ. ಆದ್ರೆ ಅಭಿವೃದ್ಧಿ ಸಹಿಸದಲ್ಲಿ ಕೆಲವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಾನು ಅವುಗಳನ್ನು ಲೆಕ್ಕಿಸದೇ ರೈತರ ಹಿತಕ್ಕಾಗಿ ದುಡಿಯುತ್ತಿದ್ದೇವೆ ಎಂದು ಶಿವಲೀಲಾ ಕುಲಕರ್ಣಿ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಓದಿ: 7ನೇ ವೇತನ ಆಯೋಗದ ಅಧ್ಯಕ್ಷರ ಜೊತೆ ಸಿಎಂ ಸಭೆ: ಬಜೆಟ್ನಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆಯಾ ಸಿಹಿ ಸುದ್ದಿ?