ಬೆಂಗಳೂರು: ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರು ಒಳಗೊಂಡ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ನಲ್ಲಿ ಅವ್ಯವಹಾರ ಆರೋಪ ಹಿನ್ನೆಲೆ ಸಮಗ್ರ ತನಿಖೆ ನಡೆಸಿ 60 ದಿನದೊಳಗಾಗಿ ವರದಿ ನೀಡುವಂತೆ ತನಿಖಾಧಿಕಾರಿಯನ್ನ ನಿಯೋಜಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ನಿಯಮ 72ರಡಿ ಗಮನ ಸೆಳೆಯುವ ಸೂಚನೆ ವೇಳೆ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಸೋಸಿಯೇಷನ್ ನಲ್ಲಿ ಕಾರ್ಯದರ್ಶಿ ಸ್ಥಾನದ ವ್ಯಕ್ತಿಯು ಬೈಲಾ ಪ್ರಕಾರ ಕಲಾವಿದರಲ್ಲದವರಿಗೆ ಸದ್ಯಸತ್ವ ನೀಡಿ ಮನಸೋಇಚ್ಛೆ ಶುಲ್ಕ ಪಡೆದು ಅವ್ಯವಹಾರ ಎಸಗಿದ್ದಾರೆ. ಅಲ್ಲದೆ ಸರ್ಕಾರಕ್ಕೆ ಜಿಎಸ್ಟಿ ಶುಲ್ಕ, ಸಿಬ್ಬಂದಿಯ ಇಎಸ್ಐ, ಪಿಎಫ್ ಹಣ ನೀಡದೆ ಅಕ್ರಮವೆಸಗಿದ್ದು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸರ್ಕಾರದ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಸಚಿವ ರಾಜಣ್ಣ, ಅಸೋಸಿಯೇಷನ್ ನಲ್ಲಿ ಅವ್ಯವಹಾರ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳೆದ ವರ್ಷದ ಅಂತ್ಯಕ್ಕೆ ಲೆಕ್ಕಪರಿಶೋಧನಾ ವರದಿಯಂತೆ ಸರ್ಕಾರಕ್ಕೆ ಪಾವತಿಸಬೇಕಿದ್ದ 59 ಲಕ್ಷ ಜಿಎಸ್ಟಿ ಬಾಕಿ ಉಳಿಸಿಕೊಂಡಿದೆ. ಸಿಬ್ಬಂದಿಯ ಭವಿಷ್ಯ ನಿಧಿ 2.88 ಲಕ್ಷ ಹಾಗೂ 13.76 ಲಕ್ಷ ಆಸ್ತಿ ತೆರಿಗೆ ಬಾಕಿಯಿರುವುದು ಕಂಡುಬಂದಿದೆ. ಅಸೋಸಿಯೇಷನ್ ಕಾರ್ಯದರ್ಶಿ ರವಿಶಂಕರ್ ವಿರುದ್ಧ ಹಣ ದುರ್ಬಳಕೆ ಸೇರಿದಂತೆ ಹಲವು ಆರೋಪಗಳು ಬಂದಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ನಿಯೋಜಿಸಿದ್ದು ಎರಡು ತಿಂಗಳೊಳಗೆ ವರದಿ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಕ್ಲಬ್ ಕಾರ್ಯಕಾರಿ ಸಮಿತಿ ಅಧಿಕಾರದ ಅವಧಿಯು 2023ಕ್ಕೆ ಮುಕ್ತಾಯಗೊಂಡಿದ್ದು, ಚುನಾವಣೆಯಾಗದ ಹಿನ್ನೆಲೆ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960 ಕಲಂ 27(2) ಅಡಿ ಆಡಳಿತಾಧಿಕಾರಿಯನ್ನ ನೇಮಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ರಾಮನಗರ ವಕೀಲರ ಪ್ರತಿಭಟನೆ ವಿಚಾರವಾಗಿ ಸದನದಲ್ಲಿ ಗದ್ದಲ: ಪಿಎಸ್ಐ ಅಮಾನತಿಗೆ ಆಗ್ರಹಿಸಿ ಧರಣಿ