ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೂತನ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಅವರಿಗೆ ನಗರದ ಹೊರವಲಯದಲ್ಲಿ ಭಾನುವಾರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕರ್ತರಿಗೆ ಬಾಡೂಟದೊಂದಿಗೆ ಮದ್ಯ ವಿತರಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಪಕ್ಷದ ಗೆಲುವಿಗೆ ದುಡಿದ ಕಾರ್ಯಕರ್ತರು ಮತ್ತು ಮುಖಂಡರಿಗೆ ಅಭಿನಂದನೆ ಸಲ್ಲಿಸಲು ಬಾವಿಕೆರೆಯ ಜಮೀನಿನಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಅವರು ಈ ಕುರಿತು ನೆಲಮಂಗಲ ಡಿವೈಎಸ್ಪಿಗೆ ಬರೆದ ಮನವಿ ಪತ್ರದಲ್ಲಿ, ಕಾರ್ಯಕ್ರಮದಲ್ಲಿ ಊಟ, ಮದ್ಯದ ವ್ಯವಸ್ಥೆ ಇದ್ದು ಬಂದೋಬಸ್ತ್ ಒದಗಿಸುವಂತೆ ಮನವಿ ಮಾಡಿದ್ದರು. ಪೊಲೀಸ್ ಇಲಾಖೆಯ ಅನುಮತಿ ಮೇರೆಗೆ ಅಬಕಾರಿ ಇಲಾಖೆ ಒಂದು ದಿನದ ಸಿಎಲ್ -5 ಅನುಮತಿ ನೀಡಿತ್ತು ಎಂದು ತಿಳಿದುಬಂದಿದೆ.
ಅಭಿನಂದನಾ ಸಮಾರಂಭದಲ್ಲಿ ಸುಮಾರು 10 ಸಾವಿರ ಜನರಿಗೆ ಬಾಡೂಟ ಹಾಕಲಾಗಿದೆ. ಇದರ ಜೊತೆಗೆ, ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ 130 ಕೇಸ್ ಬಿಯರ್ ಸೇರಿದಂತೆ ವಿವಿಧ ಬಗೆಯ ಮದ್ಯಗಳ ವಿತರಣೆ ನಡೆದಿದೆ. ಆದರೆ ಲಭ್ಯವಾದ ಮಾಹಿತಿ ಪ್ರಕಾರ, 650 ಕೇಸ್ ಬಿಯರ್ 450 ಕೇಸ್ ವಿವಿಧ ಬಗೆಯ ಮದ್ಯದ ಬಾಟಲಿಗಳು ವಿತರಣೆಯಾಗಿವೆ.
ಮದ್ಯದ ಬಾಟಲಿಗಾಗಿ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಮುಗಿಬಿದ್ದ ವಿಡಿಯೋಗಳು ವೈರಲ್ ಆಗಿವೆ. ವಿಶೇಷವಾಗಿ ಯುವಕರು, ವೃದ್ಧರೂ ಸರದಿ ಸಾಲಿನಲ್ಲಿ ನಿಂತು ಮದ್ಯದ ಬಾಟಲಿಗಳನ್ನು ಪಡೆದುಕೊಳ್ಳುತ್ತಿದ್ದ ದೃಶ್ಯ ಈ ವಿಡಿಯೋದಲ್ಲಿದೆ.
ಹೇಳುವುದು ಒಂದು ಮಾಡುವುದು ಇನ್ನೊಂದು, ನಂಬುವುದು ಹೇಗೋ ಕಾಣೆ....
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 7, 2024
ರಾಜ್ಯ ಡೆಂಗಿ ಪೀಡಿತವಾಗಿರುವಾಗ ಬಿಜೆಪಿ ನಾಯಕರು ಮದ್ಯ ಹಂಚಿಕೆಯಲ್ಲಿ ನಿರತರಾಗಿದ್ದಾರೆ. ನಾನು ಮಂಗಳೂರಿಗೆ ಭೇಟಿ ಕೊಟ್ಟಾಗ ಈಜು ಕೊಳದಲ್ಲಿ ಈಜಿದ್ದನ್ನೇ ಪ್ರಶ್ನಿಸಿದ ಬಿಜೆಪಿ ನಾಯಕರು ಈಗೆಲ್ಲಿದ್ದಾರೆ ? ಇದೇನಾ ನಿಮ್ಮ ಸಂಸ್ಕ್ರತಿ ?@DrSudhakar_ @BJP4Karnataka pic.twitter.com/RK67AQhFxx
ಈ ಕುರಿತು ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ತಮ್ಮ 'ಎಕ್ಸ್' ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, 'ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ. ರಾಜ್ಯ ಡೆಂಗ್ಯೂಪೀಡಿತವಾಗಿರುವಾಗ ಬಿಜೆಪಿ ನಾಯಕರು ಮದ್ಯ ಹಂಚಿಕೆಯಲ್ಲಿ ನಿರತರಾಗಿದ್ದಾರೆ. ನಾನು ಮಂಗಳೂರಿಗೆ ಭೇಟಿ ಕೊಟ್ಟಾಗ ಈಜು ಕೊಳದಲ್ಲಿ ಈಜಿದ್ದನ್ನೇ ಪ್ರಶ್ನಿಸಿದ ಬಿಜೆಪಿ ನಾಯಕರು ಈಗೆಲ್ಲಿದ್ದಾರೆ?. ಇದೇನಾ ನಿಮ್ಮ ಸಂಸ್ಕ್ರತಿ?' ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಮುಡಾ ಪ್ರತಿ ಸಭೆಯಲ್ಲೂ ಶಾಸಕರ ಫೈಲ್ಗಳೇ ಹೆಚ್ಚಿರುತ್ತಿತ್ತು: ಎಸ್.ಟಿ.ಸೋಮಶೇಖರ್ - S T Somashekar