ಹುಬ್ಬಳ್ಳಿ: ಇಲ್ಲಿನ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಎಂಬವರ ಪುತ್ರ ಆಕಾಶ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಎಂಟು ಆರೋಪಿಗಳನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಶನಿವಾರ (ಜೂ.22) ರಾತ್ರಿ ಆಕಾಶ್ ಮಠಪತಿ(30) ಎಂಬಾತನನ್ನು ಲೋಹಿಯಾ ನಗರದ ಪವನ್ ಸ್ಕೂಲ್ ಹಿಂಭಾಗ ಕೊಲೆ ಮಾಡಲಾಗಿತ್ತು. ಈ ಕೃತ್ಯ ಆತನಿಗೆ ಗೊತ್ತಿರುವವರಿಂದಲೇ ನಡೆದಿದೆ ಎಂದು ತಂದೆ ಶೇಖರಯ್ಯ ಮಠಪತಿ ಅನುಮಾನ ವ್ಯಕ್ತಪಡಿಸಿ, ಆಕಾಶ್ ಮಠಪತಿ ಪತ್ನಿ, ಅತ್ತೆ ಮತ್ತು ಮಾವ ಸೇರಿದಂತೆ 12 ಜನರ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆಕಾಶ್ ಪತ್ನಿ ಕಾವ್ಯಾ, ಅತ್ತೆ ಶ್ರೀದೇವಿ, ಮಾವ ಮೋಹನ ನಾಯಕ್, ಭರತ್ ನಾಯಕ್, ಅರ್ಜುನ್ ಮಗಲಿ, ಸಂಜು ಕೊಪ್ಪದ್, ರಾಹುಲ್ ಕಾಂಬಳೆ, ವಿನಾಯಕ ತಾಳಿಕೋಟಿ, ಮನೋಜ್, ಚಮಕ್ ಮೌನೇಶ್, ಮಹೇಶ್ ಮತ್ತು ಕಾರ್ತಿಕ್ ರಜಪೂತ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಕಾವ್ಯಾ, ಶ್ರೀದೇವಿ ಮತ್ತು ಮೋಹನ ನಾಯಕ್ ಅವರ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪೈಕಿ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಆಕಾಶ್ ಪ್ರೇಮ ವಿವಾಹವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ವಾಸವಾಗಿದ್ದರು. ಸಾಲದ ಹಣಕ್ಕಾಗಿ ಆಕಾಶ್‌ಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಶೇಖರಯ್ಯ ಮಠಪತಿ ದೂರಿದ್ದು, ಅವರ ಕುಮ್ಮಕ್ಕಿನಿಂದಲೇ ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು: ಆಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರ ಮರ್ಡರ್ - hubballi murder