ಬೆಂಗಳೂರು: ಚುನಾವಣಾ ಬಾಂಡ್ ಸಂಬಂಧ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖೆ ಮಾಡಬೇಕು. ಅಲ್ಲಿಯವರೆಗೆ ಬಿಜೆಪಿ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಬೇಕು ಎಂದು ಆಗ್ರಹಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ನಾ ಖಾವುಂಗಾ ನಾ ಖಾನೇ ದುಂಗಾ ಎಂದು ಹೇಳುತ್ತಾರೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಚುನಾವಣಾ ಬಾಂಡ್ ಮಾಹಿತಿಯನ್ನು ಚುನಾವಣಾ ಆಯೋಗ ಬಹಿರಂಗಪಡಿಸಿದೆ. ಇದರಿಂದ ಚುನಾವಣಾ ಬಾಂಡ್ ಮೂಲಕ ಬಿಜೆಪಿ ಹೇಗೆ ಹಣ ಮಾಡಿದೆ ಎಂದು ಗೊತ್ತಾಗಿದೆ ಎಂದರು.
ಎಸ್ಬಿಐ ಡೇಟಾ ಪ್ರಕಾರ ಶೇ.50 ರಷ್ಟು ದೇಣಿಗೆ ಬಿಜೆಪಿಗೆ ಬಂದಿದೆ. ಕಾಂಗ್ರೆಸ್ಗೆ ಕೇವಲ ಶೇ.11 ರಷ್ಟು ದೇಣಿಗೆ ಬಂದಿದೆ. ಇಷ್ಟು ದೊಡ್ಡ ಪ್ರಮಾಣದ ಹಣ ಹೇಗೆ ಬರುತ್ತೆ?. ಕಂಪನಿಗಳು ಈ ರೀತಿ ಡೊನೇಷನ್ ಏಕೆ ಕೊಟ್ಟಿವೆ?. ಇದರಲ್ಲಿ ಬಹಳಷ್ಟು ಸಂಶಯಾಸ್ಪದ ಡೊನರ್ಸ್ಗಳು ಇದ್ದಾರೆ. ದೇಣಿಗೆ ನೀಡಿದ ಹಲವು ಸಂಸ್ಥೆಗಳು ಇಡಿ, ಐಟಿ ದಾಳಿಗೆ ಒಳಗಾಗಿವೆ. ಕೇಂದ್ರ ಸರ್ಕಾರ ಈ ಸಂಸ್ಥೆಗಳ ಮೇಲೆ ಒತ್ತಡ ಹೇರಿ ಬಿಜೆಪಿಗೆ ಹಣ ನೀಡುವಂತೆ ಮಾಡಿದರು. ಇಲ್ಲಿ ಮೋದಿ ಸರ್ಕಾರ ಐಟಿ, ಇಡಿ ಅಧಿಕಾರಿಗಳಿಗೆ ಸೂಚನೆ ನೀಡಿ ನಮ್ಮ ಮೊತ್ತವನ್ನು ಜಪ್ತಿ ಮಾಡಿಸಿದೆ. ಕಾಂಗ್ರೆಸ್ ಚುನಾವಣೆಗೆ ಹೇಗೆ ಹೋಗಬೇಕು? ಎಂದು ಪ್ರಶ್ನಿಸಿದರು.
ಸತ್ಯ ಹೊರ ಬರುವ ತನಕ ಬಿಜೆಪಿಯವರ ಖಾತೆಯೂ ಜಪ್ತಿ ಮಾಡಲಿ: ನಮಗೆ ಸಣ್ಣ ಸಣ್ಣ ಡೋನರ್ಸ್ ಹಣ ಕೊಟ್ಟಿದ್ದಾರೆ. ಆದರೆ, ಬಿಜೆಪಿಯವರ ಖಾತೆ ತೆರೆದಿದೆ, ನಮ್ಮ ಖಾತೆ ಜಪ್ತಿಯಾಗಿದೆ. ನಾವು ಚುನಾವಣೆಯಲ್ಲಿ ಹೋರಾಡುವುದು ಹೇಗೆ?. ಹೀಗಾಗಿ ನಾನು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆಗ್ರಹಿಸುತ್ತೇನೆ. ಸತ್ಯ ಹೊರ ಬರುವ ತನಕ ಬಿಜೆಪಿಯವರ ಖಾತೆಯೂ ಜಪ್ತಿ ಮಾಡಲಿ. ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ವಿಶೇಷ ತನಿಖೆ ಮಾಡಿ ಬಿಜೆಪಿಗೆ ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಬಂತು?, ಕಿರುಕುಳದಿಂದ ಹಣ ಬಂತಾ? ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿಯವರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಬೇಕು. ಪ್ರಧಾನಿ ಮೋದಿ ಯಾವತ್ತೂ ಮೋದಿ ಕೀ ಸರ್ಕಾರ್, ಮೋದಿ ಕಿ ಗ್ಯಾರಂಟಿ ಅಂತಾರೆ, ಹಾಗಾಗಿ ಎಲ್ಲವೂ ಅವರ ಹೆಸರಲ್ಲಿ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಜನರ ಮೇಲೆ ಒತ್ತಡ ಹೇರಲಾಗುತ್ತಿದೆ. ಪ್ರಕರಣ ಹಾಕಿ ಅವರ ಮೇಲೆ ಒತ್ತಡ ಹಾಕಲಾಗಿದೆ. ಆ ಮೂಲಕ ಅಸಮಾನತೆ ಸೃಷ್ಟಿಯಾಗಿದೆ. ನಾ ಕಾವೂಂಗಾ ನಾ ಕಾನೇ ದೊಂಗಾ ಎನ್ನುವ ಅವರು, ನಮ್ಮ ಪಾರ್ಟಿಯೇ ಕಾವೂಂಗಾ ಅಂತಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಸಮಾಲೋಚನೆ ಮಾಡಿ ಈ ಬಗ್ಗೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯಸಭೆ ಸಂಸದ ಅಜಯ್ ಮಕೇನ್ ಮಾತನಾಡಿ, ಚುನಾವಣಾ ಆಯೋಗ ತನ್ನ ವೆಬ್ಸೈಟ್ ನಲ್ಲಿ ಚುನಾವಣಾ ಬಾಂಡ್ ಸಂಬಂಧ ಕಂಪನಿಗಳ ಹೆಸರನ್ನು ಬಹಿರಂಗಪಡಿಸಿದೆ. ಇದರಲ್ಲಿ ಭ್ರಷ್ಟಾಚಾರದ ಮಾಹಿತಿ ಹೊರ ಬಂದಿದೆ. ಚುನಾವಣಾ ಬಾಂಡ್ ಅನ್ನು ಹೇಗೆ ಬಿಜೆಪಿ ದುರ್ಬಳಕೆ ಮಾಡಿದೆ ಎಂದು ಗೊತ್ತಾಗುತ್ತೆ. ವೆಬ್ಸೈಟ್ ನಲ್ಲಿ ಒಟ್ಟು 22,217 ಬಾಂಡ್ ಬಿಡುಗಡೆ ಮಾಡಲಾಗಿದೆ. ಆದರೆ, ಸಿಇಸಿ ಕೇವಲ 18,871 ಬಾಡ್ ಬಗ್ಗೆ ಮಾಹಿತಿ ಬಹಿರಂಗ ಮಾಡಿದೆ. ಸುಮಾರು 3,346 ಬಾಂಡ್ ಬಗ್ಗೆ ಮಾಹಿತಿ ಇಲ್ಲ. 3,500 ಕೋಟಿ ರೂ. ಮೊತ್ತದ ಬಾಂಡ್ ಇದಾಗಿದೆ ಎಂದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ವೇಳಾಪಟ್ಟಿ ನಾಳೆ ಪ್ರಕಟ: ಕೇಂದ್ರ ಚುನಾವಣಾ ಆಯೋಗ