ಬೆಂಗಳೂರು: ಎಐಸಿಸಿ ವರಿಷ್ಠ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರಿಂದು ಬೆಂಗಳೂರಲ್ಲಿ ಸಭೆ ನಡೆಸಿ ಒಂದಿಷ್ಟು ಅಭಿಪ್ರಾಯ ಸಂಗ್ರಹ ಮತ್ತು ಸಲಹೆ ಸೂಚನೆ ನೀಡಲಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ನಮ್ಮನ್ನು ಸಭೆಗೆ ಕರೆದಿದ್ದಾರೆ. ಯಾವ ವಿಚಾರಕ್ಕೆ ಅನ್ನೋದು ಗೊತ್ತಿಲ್ಲ. ನಮಗೂ ಅಜೆಂಡಾ ಏನು ಅಂತ ಹೇಳಿಲ್ಲ. ಒಂದಿಷ್ಟು ಅಭಿಪ್ರಾಯ ಸಂಗ್ರಹ ಮಾಡ್ತಾರೆ. ಸರ್ಕಾರ ಯಾವ ರೀತಿ ನಡೆಯಬೇಕು ಅನ್ನೋದರ ಬಗ್ಗೆ ಚರ್ಚೆ ಆಗಬಹುದು. ಪಕ್ಷದ ಹಿತದೃಷ್ಟಿಯಿಂದ ಚರ್ಚೆ ನಡೆಯಲಿದೆ. ಹೈಕಮಾಂಡ್ಗೆ ತನ್ನದೇ ಆದ ಅಧಿಕಾರ ಇದೆ. ತಪ್ಪಿರುವವರಿಗೆ ಸೂಚನೆ ಕೊಡಬಹುದು. ಚೆನ್ನಾಗಿ ಕೆಲಸ ಮಾಡುವವರಿಗೆ ಚೆನ್ನಾಗಿ ಕೆಲಸ ಮಾಡಿ ಅನ್ನಬಹುದು ಎಂದರು.
ಸಬ್ ಇನ್ಸ್ಪೆಕ್ಟರ್ ಪರಶುರಾಮ್ ಸಾವು ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿ, ಸುಮ್ಮನೆ ಎಲ್ಲವೂ ಹಿಂಗೇ ಆಗಿಬಿಟ್ಟಿದೆ. ಡೆತ್ ನೋಟ್ ಏನಾದರೂ ಇದೆಯಾ?. ಅದರ ಬಗ್ಗೆ ಗೃಹ ಸಚಿವರು ಸ್ಪಷ್ಟನೆ ಕೊಡುತ್ತಾರೆ ಎಂದು ತಿಳಿಸಿದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಸಿಎಂ ಸುದೀರ್ಘವಾಗಿ ಉತ್ತರ ಹೇಳಿದ್ದಾರೆ. ಮುಡಾದಲ್ಲಿ ಸಿಎಂ ಅವರದ್ದು ಎಳ್ಳಷ್ಟೂ ಪಾತ್ರವಿಲ್ಲ. ರಾಮದಾಸ್, ಜಿ.ಟಿ.ದೇವೇಗೌಡ ಇರುವ ಸಭೆಯಲ್ಲಿ ತಪ್ಪಾಗಿದೆ ಎಂದು ಹೇಳಿದ್ದಾರೆ. ಮುಡಾ ಸಭೆಯಲ್ಲಿ ತಪ್ಪಾಗಿದೆ ಎಂದು ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಅಸ್ಥಿರ ಆಗುತ್ತೆ ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕುಮಾರಸ್ವಾಮಿ ಅವರಿಗೆ ಸಮ್ಮಿಶ್ರ ಸರ್ಕಾರವನ್ನೇ ಉಳಿಸಿಕೊಳ್ಳಲು ಆಗಲಿಲ್ಲ. ನಾನು ಕೂಡ ಅಂದು ಗೃಹ ಸಚಿವನಾಗಿದ್ದೆ. ಇವತ್ತು ಕುಮಾರಸ್ವಾಮಿ ಯಾರ ಜೊತೆಗೆ ಪಾದಯಾತ್ರೆ ಮಾಡುತ್ತಿದ್ದಾರೋ ಅವರೇ ಸರ್ಕಾರ ಉರುಳಿಸಿದರು. ಇದು ಅವಕಾಶವಾದಿ ಪಾದಯಾತ್ರೆ. ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿ, ದೆಹಲಿಯಲ್ಲಿ ಏನು ನಾಟಕ ನಡೆಯಿತು ಎಂದು ಗೊತ್ತಿದೆ. ಒಲ್ಲದ ಮನಸ್ಸಿನಿಂದ ಕುಮಾರಸ್ವಾಮಿ ಪಾದಯಾತ್ರೆಗೆ ಬಂದಿದ್ದಾರೆ. ಪಾದಯಾತ್ರೆಗೆ ಭಾಗಿಯಾಗುವಂತೆ ಒತ್ತಡ ಹಾಕಿದ ನಂತರವೇ ಭಾಗಿಯಾಗಿದ್ದು ಎಂದು ಸಚಿವರು ಟಾಂಗ್ ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ತೊಂದರೆ ಕೊಟ್ರೆ ಬೀದಿಗಿಳಿದು ಹೋರಾಟ: ಅಹಿಂದ ನಾಯಕರ ಎಚ್ಚರಿಕೆ - AHINDA Leaders