ಬೆಂಗಳೂರು: ಬಹುಭಾಷಾ ನಟಿ ಛಾಯಾ ಸಿಂಗ್ ಅವರ ತಾಯಿಯ ಮನೆಯಲ್ಲಿ ಕಳ್ಳತನ ಎಸಗಿದ್ದ ಮನೆಗೆಲಸದ ಮಹಿಳೆಯನ್ನು ಬಸವೇಶ್ವರನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಷಾ ಬಂಧಿತ ಆರೋಪಿ. ಎನ್.ಹೆಚ್.ಸಿ.ಎಸ್ ಲೇಔಟ್‌ನಲ್ಲಿರುವ ಛಾಯಾ ಸಿಂಗ್ ಅವರ ತಾಯಿ ಚಮನ್ ಲತಾ ಸಿಂಗ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಉಷಾ, ಚಿನ್ನಾಭರಣ ಕಳ್ಳತನ ಮಾಡಿದ್ದಳು.
ಏಪ್ರಿಲ್ 13ರಂದು ರೂಮ್‌ನಲ್ಲಿದ್ದ ಬೀರುವಿನ ಲಾಕರ್ ಅನ್ನು ಆರೋಪಿ ಮುಚ್ಚುತ್ತಿರುವುದನ್ನು ಗಮನಿಸಿದ್ದ ಚಮನ್ ಲತಾ, ಅನುಮಾನಗೊಂಡು ಪ್ರಶ್ನಿಸಿದ್ದರು. ಆದರೆ ಆರೋಪಿ ಸರಿಯಾಗಿ ಮಾತನಾಡದೆ ಸನ್ನೆಯಲ್ಲಿ ಉತ್ತರ ನೀಡಲು ಯತ್ನಿಸಿದ್ದಳು. ತಕ್ಷಣ ತಡೆದು ಪರಿಶೀಲಿಸಿದಾಗ ಆಕೆಯ ಬಾಯಲ್ಲಿ ಚಿನ್ನದ ಮೂಗಿನ ಬೊಟ್ಟು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿತ್ತು.
ಬಳಿಕ ಬೀರು ಪರಿಶೀಲಿಸಿದಾಗ ವಿವಿಧ ಆಭರಣಗಳು ನಾಪತ್ತೆಯಾಗಿರುವುದನ್ನು ತಿಳಿದ ಚಮನ್ ಲತಾ, ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉಷಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಈ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ. ಬಂಧಿತಳಿಂದ ಒಟ್ಟು 66 ಗ್ರಾಂ ಚಿನ್ನ, 155 ಗ್ರಾಂ ಬೆಳ್ಳಿಯ ವಸ್ತುಗಳುಸಹಿತ ಒಟ್ಟು 4 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ಕನ ಮನೆಯಲ್ಲಿ ₹65 ಲಕ್ಷದ ನಗ, ನಾಣ್ಯ ದೋಚಿದ್ದ ತಂಗಿ ಅರೆಸ್ಟ್ - House Theft