ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಹಾಗೂ ಪ್ರಕರಣದಿಂದ ಪಾರಾಗಲು ನಟ ದರ್ಶನ್ ತಮ್ಮ ಆಪ್ತರೊಬ್ಬರಿಂದ ಸಾಲ ಪಡೆದಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ದರ್ಶನ್ ಆಪ್ತ ಮೋಹನ್ ರಾಜ್ ಎಂಬುವರು 40 ಲಕ್ಷ ರೂ.ಗಳನ್ನು ಸಾಲದ ರೂಪದಲ್ಲಿ ನೀಡಿದ್ದರೆಂದು ತನಿಖೆಯಲ್ಲಿ ಗೊತ್ತಾಗಿದೆ.
ಹತ್ಯೆ ಪ್ರಕರಣದಲ್ಲಿ ಮುಂದೆ ಸಂಕಷ್ಟ ಎದುರಾದರೆ, ಯಾವುದೇ ರೀತಿಯಲ್ಲೂ ತಮ್ಮ ವಿರುದ್ಧ ಸಾಕ್ಷ್ಯಗಳು ಇರಬಾರದು ಎಂಬ ಕಾರಣಕ್ಕೆ ಇತರ ಆರೋಪಿಗಳನ್ನು ಒಪ್ಪಿಸಲು ಹಣ ಪಡೆದಿದ್ದರು. ಆ ಹಣದ ಪೈಕಿ ಜೂನ್ 19ರಂದು ಆರ್.ಆರ್.ನಗರದ ದರ್ಶನ್ ಮನೆಯಲ್ಲಿ ಶೋಧ ನಡೆಸಿದಾಗ 37.40 ಲಕ್ಷ ರೂ. ಜಪ್ತಿ ಮಾಡಲಾಗಿದೆ. ದರ್ಶನ್ ನೀಡಿದ್ದ 3 ಲಕ್ಷ ರೂ. ಹಣ ಹಾಗೂ ಮತ್ತಿತರ ವಸ್ತುಗಳನ್ನು ಅವರ ಪತ್ನಿ ವಿಜಯಲಕ್ಷ್ಮಿ ಅವರು ತನಿಖಾ ತಂಡಕ್ಕೆ ತಂದುಕೊಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪೊಲೀಸ್ ರಿಮ್ಯಾಂಡ್ ಅರ್ಜಿಯಲ್ಲಿ ಇರುವುದೇನು?: ಪ್ರಕರಣ ಸಂಬಂಧ ನಟ ದರ್ಶನ್ ಮನೆಯಿಂದ 37.40 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಆತನ ಪತ್ನಿ ವಿಜಯಲಕ್ಷ್ಮೀಗೆ ನೀಡಿದ್ದ 3 ಲಕ್ಷ ರೂ. ಕೂಡ ಜಪ್ತಿ ಮಾಡಲಾಗಿದೆ. ಆದರೆ, ದರ್ಶನ್ ಹಣದ ಮೂಲದ ಬಗ್ಗೆ ತನಿಖೆ ನಡೆಸಿ, ಅದರ ದಾಖಲಾತಿ ಪಡೆಯಬೇಕಿದೆ. ಕೃತ್ಯ ಎಸಗಿದ ಬಳಿಕ ಸಮಾಜದ ಕೆಲ ಪ್ರತಿಷ್ಠಿತ ವ್ಯಕ್ತಿಗಳಿಗೆ ದರ್ಶನ್ ಸಂಪರ್ಕಿಸಿದ್ದು, ಅದರ ಉದ್ದೇಶ ಹಾಗೂ ಕಾರಣ ಕುರಿತು ಆರೋಪಿಯ ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ನಮೂದಿಸಿದ್ದಾರೆ.
ಸಾಕ್ಷ್ಯನಾಶ: ಪ್ರಕರಣದ ಸಾಕ್ಷ್ಯನಾಶ ಮಾಡುವಲ್ಲಿ ಆರೋಪಿ ಪ್ರದೂಷ್ ಪ್ರಮುಖ ಪಾತ್ರವಹಿಸಿದ್ದಾಾನೆ. ಈತ ತನಿಖೆಗೆ ಸಹಕಾರ ನೀಡುತ್ತಿಲ್ಲ. ಪ್ರಮುಖವಾಗಿ ಈತ ಕೃತ್ಯದ ಸ್ಥಳಕ್ಕೆ ಮತ್ತೊಬ್ಬ ವ್ಯಕ್ತಿಯನ್ನು ಕರೆದೊಯ್ದಿದ್ದಾನೆ. ಆ ಅಪರಿಚಿತ ವ್ಯಕ್ತಿ ಬಗ್ಗೆ ಈತನಿಗೆ ಮಾತ್ರ ತಿಳಿದಿದ್ದು, ಆತ ಯಾರೆಂಬ ಬಗ್ಗೆ ಪ್ರದೂಷ್‌ನನಿಂದ ಮಾಹಿತಿ ಪಡೆಯಬೇಕಿದೆ. ರೇಣುಕಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಲು ಬಳಸಿದ್ದ ವಸ್ತುಗಳ್ನು ಆರೋಪಿ ಧನರಾಜ್ ಎಲ್ಲಿ ಖರೀದಿಸಿದ್ದ ಎಂಬುದನ್ನು ಆತ ಹೇಳುತ್ತಿಲ್ಲ. ಆತನ ವಿಚಾರಣೆ ಅಗತ್ಯವಿದೆ. ಅಲ್ಲದೇ, ಈತ ಕೃತ್ಯದ ಸ್ಥಳಕ್ಕೆ ಬೇರೆ ವ್ಯಕ್ತಿಗಳ ಜೊತೆ ಬಂದು ಹೋಗಿದ್ದಾನೆ ಎಂಬುದು ತನಿಖೆಯಲ್ಲಿ ಕಂಡು ಬಂದಿದೆ. ಈ ಮಾಹಿತಿ ಪಡೆಯಬೇಕಿದ್ದು, ಆರೋಪಿ ವಿನಯ್ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಬೇಕಾದ ಅತಿಮುಖ್ಯವಾದ ಸಾಕ್ಷ್ಯ ದೊರೆತಿದೆ. ಅದನ್ನು ಕಳುಹಿಸಿದ್ದ ವ್ಯಕ್ತಿ ಯಾರೆಂಬುದನ್ನು ವಿನಯ್ ಕಡೆಯಿಂದ ವಿಚಾರಣೆ ನಡೆಸಬೇಕಿದೆ ಎಂದು ರಿಮ್ಯಾಂಡ್ ಅರ್ಜಿಯಲ್ಲಿ ತಿಳಿಸಲಾಗಿತ್ತು.
ಜೊತೆಗೆ, ಕೃತ್ಯ ನಡೆದ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಕೆಲವರು ಸಾಕ್ಷ್ಯ ನುಡಿಯದಂತೆ ಹಣದ ಆಮಿಷವೊಡ್ಡಿದ್ದಾರೆ. ಆ ವ್ಯಕ್ತಿಗಳು ಯಾರೆಂಬ ಬಗ್ಗೆ ಈ ನಾಲ್ವರು ಆರೋಪಿಗಳಿಂದ ಮಾಹಿತಿ ಪಡೆಯಬೇಕೆಂದು ರಿಮ್ಯಾಂಡ್ ಅರ್ಜಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.
ದರ್ಶನ್ಗೆ ಪೊಲೀಸ್ ಕಸ್ಟಡಿ: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ನಾಲ್ಕು ಮಂದಿಗೆ ಎರಡು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನುಳಿದವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ನಟ ದರ್ಶನ್ ಹಾಗೂ ಸಹಚರರಾದ ಧನರಾಜ್, ಪ್ರದೋಷ್ ವಿನಯ್ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, ಪವನ್, ನಂದೀಶ್, ರವಿ, ಅನುಕುಮಾರ್, ಜಗದೀಶ್, ನಾಗರಾಜ್, ಲಕ್ಷ್ಮಣ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ 24ನೇ ಎಸಿಎಂಎಂ ನ್ಯಾಯಾಲಯ ಗುರುವಾರ ಆದೇಶಿಸಿದೆ. ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.