ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಚಾರ್ಜ್ಶೀಟ್ನಲ್ಲಿರುವ ಅಂಶಗಳ ಬಗ್ಗೆ ನಟ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಮಂಡಿಸಿ ವಾದಕ್ಕೆ ಮಂಗಳವಾರ ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಾರ್ಜ್ಶೀಟ್ನಲ್ಲಿನ ಹಲವು ಅಂಶಗಳ ಬಗ್ಗೆ ಪ್ರಶ್ನೆ ಎತ್ತಿದ ದರ್ಶನ್ ಪರ ವಕೀಲರು - Actor Darashna Bail Plea ಸರ್ಕಾರಿ ಪರ ಅಭಿಯೋಜಕ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಿದರು. ವಾದ ಮಂಡನೆಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ಬುಧವಾರ ಮಧ್ಯಾಹ್ನ 12.30ಕ್ಕೆ ನಗರದ 57ನೇ ಸಿಸಿಹೆಚ್ ನ್ಯಾಯಾಲಯ ಮುಂದೂಡಿತು.
ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಅಕ್ಟೋಬರ್ 4 ಹಾಗೂ 5ರಂದು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಚಾರ್ಜ್ಶೀಟ್ನಲ್ಲಿ ಲೋಪದೋಷಗಳಿವೆ ಎಂದು ತಿಳಿಸಿದ್ದರು. ಇದಕ್ಕೆ ಕೌಂಟರ್ ಎಂಬಂತೆ ಪ್ರಸನ್ನ ಕುಮಾರ್ ಇಂದು, ಹತ್ಯೆಗೆ ಸಂಚು, ವೈದ್ಯಕೀಯ ವರದಿ ಹಾಗೂ ಸಾಕ್ಷಿಗಳ ಹೇಳಿಕೆ ಸೇರಿದಂತೆ ಪ್ರತಿಯೊಂದೂ ಅಂಶಗಳ ಬಗ್ಗೆ ಸಮರ್ಥ ವಾದ ಮಂಡಿಸಿದರು.
ವಾದ ಆರಂಭಿಸಿದ ಎಸ್ಪಿಪಿ, "ಗೌತಮ್ ಎಂಬ ಹೆಸರಿನಲ್ಲಿ ರೇಣುಕಾಸ್ವಾಮಿ ಫೆಬ್ರುವರಿಯಿಂದಲೂ ಪವಿತ್ರಾಗೌಡಗೆ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ. ಮರ್ಮಾಂಗದ ಫೋಟೊ ಕಳುಹಿಸಿದ್ದ. ಕೇವಲ ಒಂದು ಸಲ ಬ್ಲಾಕ್ ಮಾಡಿ ಪೊಲೀಸರಿಗೆ ದೂರು ನೀಡಿದ್ದರೆ ಕ್ರಮವಾಗುತ್ತಿತ್ತು. ಆದರೆ ಇದನ್ನು ಮಾಡದೇ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟ. ಪವಿತ್ರಗೌಡ ಸೋಗಿನಲ್ಲಿ ಪ್ರಕರಣದ ಮೂರನೇ ಆರೋಪಿ ಪವನ್ ಚಾಟ್ ಮಾಡಿ ಇತರ ಆರೋಪಿಗಳ ಮೂಲಕ ರೇಣುಕಾಸ್ವಾಮಿ ಮನೆ ಹಾಗೂ ಕೆಲಸ ಮಾಡುತ್ತಿದ್ದ ವಿಳಾಸವನ್ನು ಪತ್ತೆ ಮಾಡಿದ್ದಾರೆ" ಎಂದರು.
ರೇಣುಕಾಸ್ವಾಮಿ ಎಂಬ ವ್ಯಕ್ತಿ ಇದ್ದಾನೆ ಎಂಬ ಮಾಹಿತಿ ಆರೋಪಿಗಳಿಗಿರಲಿಲ್ಲ ಎಂದು ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದಕ್ಕೆ ಪ್ರತಿವಾದಿಸಿದ ಎಸ್ಪಿಪಿ, "ರೇಣುಕಾಸ್ವಾಮಿಗೆ ಆರೋಪಿಗಳು ಪರಿಚಯವಾಗಿರುವ ದಾಖಲಾತಿಗಳಿವೆ. ಜೂ.6ರಂದೇ ಪವಿತ್ರಾ, ಪವನ್, ಧನರಾಜ್ ಸೇರಿ ಇತರರು ಕರೆ ವಿನಿಮಯ ಮಾಡಿರುವುದು, ಆರೋಪಿಗಳೆಲ್ಲರೂ ಅಪಹರಿಸಿ ಹತ್ಯೆಯಾದ ಜಾಗದಲ್ಲಿದ್ದರು ಎಂಬುದು ಟವರ್ ಲೊಕೇಷನ್ ಹಾಗೂ ಟೆಕ್ನಿಕಲ್ ಎವಿಡೆನ್ಸ್ಗಳಿಂದ ರುಜುವಾಗಿದೆ. ರೇಣುಕಾಸ್ವಾಮಿಯನ್ನು ಅಪಹರಿಸಿ ಇಟಿಯೋಸ್ ಕಾರಿನಲ್ಲಿ ಬರುವಾಗ ಆರೋಪಿಗಳಿರುವುದು ಸಿಸಿಟಿವಿ ಸೆರೆಯಾಗಿದೆ. ಜೂ.8ರಂದು ಮಧ್ಯಾಹ್ನ 1.32ಕ್ಕೆ ಅಪಹರಣಕಾರರು ಪಟ್ಟಣಗೆರೆ ಶೆಡ್ಗೆ ಬಂದಿದ್ದಾರೆ. ಎ3ಯಿಂದ 9ನೇ ಆರೋಪಿಗಳು ರೇಣುಕಾಸ್ವಾಮಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಫೋಟೋವನ್ನು ಆರೋಪಿ ವಿನಯ್ ಕಳುಹಿಸಿದ್ದರು. ಪಟ್ಟಣಗೆರೆಯ ಭದ್ರತಾ ಸಿಬ್ಬಂದಿ ಆರೋಪಿಗಳು ಸ್ಥಳದಲ್ಲಿರುವುದರ ಬಗ್ಗೆ ಹೇಳಿಕೆ ನೀಡಿದ್ದಾರೆ. ಕೃತ್ಯ ಬಳಿಕ ಕಾರಿನಲ್ಲಿ ತೆರಳಿರುವ ಬಗ್ಗೆ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ" ಎಂದು ವಿವರಿಸಿದರು.
ಸಾಕ್ಷಿಗಳ ಹೇಳಿಕೆಯನ್ನು ತನಿಖಾಧಿಕಾರಿಗಳು ತಡವಾಗಿ ದಾಖಲಿಸಿದ್ದರೆಂಬ ಸಿ.ವಿ.ನಾಗೇಶ್ ವಾದಕ್ಕೆ ಪ್ರತಿವಾದಿಸಿದ ಎಸ್ಪಿಪಿ, "ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಹೇಳಿಕೆ ದಾಖಲಿಸಲಾಗಿದೆ. ನಂದೀಶ್, ಧನರಾಜ್ ಅವರು ಜೂ.8ರಂದು ಮಧ್ಯಾಹ್ನ 1 ಗಂಟೆ ವೇಳೆ ಶೆಡ್ನಲ್ಲಿದ್ದರು. ಬಳಿಕ ಇನ್ನಿತರ ಆರೋಪಿಗಳು ಬಂದು ಹೋಗಿರುವ ಬಗ್ಗೆ ಪ್ರತ್ಯಕ್ಷ ಸಾಕ್ಷಿಯೊಬ್ಬರು 164 ಹೇಳಿಕೆ ನೀಡಿದ್ದಾರೆ. ಅಲ್ಲದೆ ಆರೋಪಿಗಳೆಲ್ಲರೂ ಒಂದೇ ಕಡೆ ಇರುವುದಕ್ಕೆ ತಾಂತ್ರಿಕ ಸಾಕ್ಷಿಯಿದೆ" ಎಂದರು.
"ರೇಣುಕಾಸ್ವಾಮಿಗೆ ಮರದ ತುಂಡು, ಹಗ್ಗದಿಂದ ಹಲ್ಲೆ ಮಾಡಿದ್ದರು. ಕೆಲ ಹೊತ್ತಿನ ಬಳಿಕ ದರ್ಶನ್ ಹಾಗೂ ಪವಿತ್ರಗೌಡ ಶೆಡ್ಗೆ ಬಂದರು. ರೇಣುಕಾಸ್ವಾಮಿಯನ್ನು ಕಾಲಿನಿಂದ ಒದ್ದರು. ಪವಿತ್ರಾಗೌಡ ಚಪ್ಪಲಿಯಿಂದ ಹೊಡೆದರು. ಎದೆ ಮೇಲೆ ಗಾಯವಾಗಿರುವ ಬಗ್ಗೆ ವರದಿ ಇದ್ದು, ಇದಕ್ಕೆ ಪೂರಕವಾಗಿದೆ. ಬಳಿಕ ದರ್ಶನ್ ಅವರು ಮರ್ಮಾಂಗಕ್ಕೆ ಒದ್ದರು" ಎಂಬ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಯನ್ನು ನ್ಯಾಯಾಲಯದ ಮುಂದಿಟ್ಟರು.
"ಎದೆಗೂಡಿನ ಮುಳೆ ಮುರಿದಿರುವುದು, ದೇಹದಲ್ಲಿ ಎಲ್ಲೆಲ್ಲಿ ರಕ್ತಬಂದಿದೆ ಎಂಬ ವಿವರವಿದೆ. ದೇಹದ 13 ಭಾಗಗಳಿಂದ ರಕ್ತ ಬಂದಿರುವುದು ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿದೆ. ಮರಣೋತ್ತರ ಪರೀಕ್ಷೆ ವಿಡಿಯೋ ಚಿತ್ರೀಕರಿಸಲಾಗಿದೆ. ಪೋಸ್ಟ್ ಮಾರ್ಟಂ ವಿಳಂಬದಿಂದ ತನಿಖೆಗೆ ತೊಂದರೆಯಾಗಿಲ್ಲ, ಊಟ ಮಾಡಿದ ಎರಡು ಗಂಟೆಯಲ್ಲಿ ಸಾವು ಸಂಭವಿಸಿರುವ ಬಗ್ಗೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆತನ ಮಾರ್ಮಾಂಗ ಹೊರಬಂದಿರುವುದು, ಶ್ವಾಸಕೋಶ ಸೇರಿದಂತೆ 39ಕ್ಕೂ ಹೆಚ್ಚು ಕಡೆ ಗಾಯಗಳಾಗಿದ್ದು, ಇದು ದರ್ಶನ್ ರಕ್ತಚರಿತ್ರೆಯಾಗಿದೆ" ಎಂದು ವಾದ ಮಂಡಿಸಿದರು.
ಬಳಿಕ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಬುಧವಾರಕ್ಕೆ ಮುಂದೂಡಿತು. ಈ ಮೂಲಕ ಮತ್ತೊಮ್ಮೆ ದರ್ಶನ್ಗೆ ಜಾಮೀನು ಸಿಗಲಿಲ್ಲ.