ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ದರ್ಶನ್ ಸೇರಿ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ, ಇಂದು ಆದೇಶ ಪ್ರಕಟಿಸಿದರು.
ಪರಪ್ಪನ ಅಗ್ರಹಾರ ಹಾಗು ವಿವಿಧ ಜೈಲುಗಳಲ್ಲಿರುವ ಆರೋಪಿಗಳಾದ ಪವಿತ್ರಾ ಗೌಡ, ಆರ್.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ, ಪ್ರದೋಷ್ ರಾವ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ.
ಹೈಕೋರ್ಟ್ ವಿಧಿಸಿರುವ ಷರತ್ತುಗಳು:
- ಎಲ್ಲ ಆರೋಪಿಗಳು ಒಂದು ಲಕ್ಷ ರೂ. ಬಾಂಡ್, ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ನೀಡಬೇಕು.
- ವಿಚಾರಣೆಗೆ ತಪ್ಪದೇ ನ್ಯಾಯಾಲಯಕ್ಕೆ ಹಾಜರಾಗಬೇಕು.
- ಸಾಕ್ಷಿಗಳಿಗೆ ಬೆದರಿಕೆ ಮತ್ತು ಸಾಕ್ಷ್ಯಾಧಾರಗಳ ನಾಶಕ್ಕೆ ಮುಂದಾಗಬಾರದು.
- ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗಬಾರದು.
- ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗಬಾರದು.
ಆದೇಶದ ವಿವರ: ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಜಿದಾರರಿಗೆ ಗಂಭೀರವಾದ ಅಪರಾಧ ಹಿನ್ನೆಲೆ ಇಲ್ಲ. ಅವರೆಲ್ಲರೂ ಸಮಾಜದಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ವ್ಯಕ್ತಿಗಳು. ಅರ್ಜಿದಾರರು ಕಳೆದ ಆರು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ಧಾರೆ. ಪ್ರಕರಣದ ದೋಷಾರೋಪಟ್ಟಿಯಲ್ಲಿ 262 ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ತೋರಿಸಿದೆ. 13 ಸಂಪುಟಗಳಲ್ಲಿ 587 ದಾಖಲೆಗಳನ್ನು ನೀಡಿದೆ. ಶೀಘ್ರದಲ್ಲೇ ಪ್ರಕರಣದ ವಿಚಾರಣೆಯನ್ನು ವಿಚಾರಣಾ ನ್ಯಾಯಾಲಯ ಪೂರ್ಣಗೊಳಿಸುವ ಸಾಧ್ಯತೆ ಕಡಿಮೆ. ಆದ್ದರಿಂದ ಎಲ್ಲಾ ಅರ್ಜಿದಾರರಿಗೆ ಜಾಮೀನು ನೀಡಲಾಗುತ್ತಿದೆ ಎಂದು ಪೀಠ ಹೇಳಿದೆ.
ಜೊತೆಗೆ, ಪಂಕಜ್ ಬನ್ಸಾಲ್ ಮತ್ತು ಪುರ್ಕಾಯಾಸ್ತಾ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಆರೋಪಿಗಳನ್ನು ಬಂಧನ ಮಾಡಿದ ಕೂಡಲೇ ಅವರನ್ನು ಏಕೆ ಬಂಧನ ಮಾಡಲಾಗಿದೆ ಎಂಬ ಕಾರಣ/ಆಧಾರಗಳನ್ನು (ಮೆಮೊ ಆಫ್ ಗ್ರೌಂಡ್ಸ್ ಆಫ್ ಅರೆಸ್ಟ್) ಒದಗಿಸಬೇಕು. ಪ್ರಕರಣದಲ್ಲಿ ಪವಿತ್ರಾ ಗೌಡ (ಎ-1), ದರ್ಶನ್ (ಎ-2) ನಾಗರಾಜು (ಎ-11), ಲಕ್ಷ್ಮಣ್ (ಎ-12), ಪ್ರದೋಷ್ (ಎ-14) ಅವರನ್ನು 2024ರ ಜೂ.11ರಂದು ಬಂಧಿಸಲಾಗಿದೆ. ಜಗದೀಶ್ (ಎ-6), ಅನುಕುಮಾರ್ (ಎ-7) ಅವರನ್ನು ಜೂ.14ರಂದು ಬಂಧಿಸಲಾಗಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿದರೆ, ಆರೋಪಿಗಳನ್ನು ಬಂಧನ ಮಾಡಿದ ಕೂಡಲೇ, ಅವರಿಗೆ ಬಂಧನದ ಕಾರಣ/ಆಧಾರಗಳನ್ನು ಒದಗಿಸಿಲ್ಲ ಎಂಬುದು ಕಂಡುಬರುತ್ತದೆ. ಇನ್ನು ಆರೋಪಿಗಳ ಬಂಧನದ ವೇಳೆ ಕೋರ್ಟ್ ಸಾಕ್ಷಿಗಳು ಹಾಜರಿದ್ದು, ತಾವು ಏಕೆ ಬಂಧನ ಮೆಮೊಗೆ ಸಹಿ ಹಾಕಿದೆವು? ಎಂಬ ಬಗ್ಗೆ ತನಿಖಾಧಿಕಾರಿಗಳ ಮುಂದೆ ದಾಖಲಿಸಿರುವ ಹೇಳಿಕೆಯಲ್ಲಿ ಏನನ್ನೂ ಹೇಳಿಲ್ಲ. ಸಾಕ್ಷಿಗಳ ಹೇಳಿಕೆಯನ್ನು ವಿಳಂಬವಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ಪೀಠ ಹೇಳಿದೆ.
ಆರೋಪಿಗಳನ್ನು ಬಂಧಿಸಿದ ಕೂಡಲೇ ಬಂಧನದ ಆಧಾರದ ಮೊಮೊ ಒದಗಿಸಲಾಗಿದೆ ಎಂಬ ಪ್ರಾಸಿಕ್ಯೂಷನ್ ವಾದ ತೀರ ಸಂಶಯಾಸ್ಪದವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ವಿವಿಧ ದಿನಾಂಕದಲ್ಲಿ ಬಂಧಿಸಲಾಗಿದೆ. ಬಂಧನಕ್ಕೆ ನೀಡಲಾಗಿರುವ ಕಾರಣಗಳನ್ನು ಮಾತ್ರ ಒಂದೇ ತರಹ ಇದೆ. ಅದು ಸೈಕ್ಲೋಸ್ಟೈಲ್ ಕಾಪಿಯಾಗಿದೆ. 2023ರ ಅ.3ರ ನಂತರ ಆರೋಪಿಯನ್ನು ಬಂಧಿಸಿದ ಕೂಡಲೇ ಬಂಧನ ಆಧಾರದ ಮೆಮೊವನ್ನು ಒದಗಿಸುವುದು ಕಡ್ಡಾಯ. ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್) ಈ ನಿಯಮ ಪಾಲನೆ ಮಾಡದಿರುವುದರಿಂದ ಅರ್ಜಿದಾರರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಅಂತಿಮವಾಗಿ, ಆರೋಪಿಗಳಿಗೆ ಒದಗಿಸುವುದಕ್ಕಾಗಿ ಏಕರೂಪ ಮೊಮೊ ಮಾದರಿಯನ್ನು ಸಿದ್ಧಪಡಿಸಲು ಕೂಡಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಕ್ರಮ ಜರುಗಿಸಬೇಕು. ಅದನ್ನು ಆರೋಪಿಯ ರಿಮಾಂಡ್‌ಗೆ ಕೋರಿ ಸಲ್ಲಿಸುವ ವೇಳೆ ರಿಮಾಂಡ್ ವರದಿಯೊಂದಿಗೆ ಲಗತ್ತಿಸಬೇಕು. ಅದನ್ನು ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ನ್ಯಾಯಾಲಯಗಳು ತಪ್ಪದೇ ದಾಖಲೆಗೆ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿರುವ ಹೈಕೋರ್ಟ್, ಈ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಿಗೆ ಕಳುಹಿಸಬೇಕು ಎಂದು ರಿಜಿಸ್ಟ್ರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಜೂನ್ 11ರಂದು ದರ್ಶನ್ ಮತ್ತಿತರರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಜೂನ್ 22ರಿಂದ ದರ್ಶನ್ ಹಾಗೂ ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್‌ಗೆ ಅಕ್ಟೋಬರ್ 30ರಂದು ಹೈಕೋರ್ಟ್ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಅಂದಿನಿಂದ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಬೆನ್ನುಹುರಿ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಕ್ಟೋಬರ್ 14ರಂದು ವಿಚಾರಣಾಧೀನ ನ್ಯಾಯಾಲಯವು ದರ್ಶನ್, ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್‌ಗೆ ಜಾಮೀನು ನಿರಾಕರಿಸಿತ್ತು. ಎಂಟನೇ ಆರೋಪಿ ರವಿಶಂಕರ್ ಅಲಿಯಾಸ್ ರವಿ, 13ನೇ ಆರೋಪಿ ದೀಪಕ್ ಕುಮಾರ್ ಅಲಿಯಾಸ್ ದೀಪಕ್‌ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಅದಕ್ಕೂ ಮುನ್ನ, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ ಮತ್ತು ನಿಖಿಲ್ ನಾಯಕ್‌ಗೆ ನ್ಯಾಯಾಲಯವು ಜಾಮೀನು ನೀಡಿತ್ತು.
ಇನ್ನೂ ಜಾಮೀನು ಸಿಗದವರು ಯಾರೆಲ್ಲಾ?: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ 17 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ ಐವರಿಗೆ ಜಾಮೀನು ಮಂಜೂರಾಗಿದೆ. ಈಗ ಏಳು ಮಂದಿಗೆ ಜಾಮೀನು ಮಂಜೂರಾಗಿದೆ. ಇನ್ನು ಪುಟ್ಟಸ್ವಾಮಿ ಅಲಿಯಾಸ್ ಪವನ್, ರಾಘವೇಂದ್ರ, ನಂದೀಶ್, ಧನರಾಜ್ ಡಿ ಅಲಿಯಾಸ್ ರಾಜು, ವಿ.ವಿನಯ್‌ಗೆ ಜಾಮೀನು ಮಂಜೂರಾಗಿಲ್ಲ.
ಇದನ್ನೂ ಓದಿ: ಸೋಡಿಯಂ ಬಳಸಿ ಸ್ಫೋಟಗೊಳಿಸಿದ ಪ್ರಕರಣ: ಡ್ರೋನ್ ಪ್ರತಾಪ್ ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು