ಮೈಸೂರು: ''ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿ ಆದರೂ, ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿಬೇಡಿ, ಯಾರೇ ಸ್ಪರ್ಧಿಸಿದರೂ ಗೆಲುವಿಗಾಗಿ ಶ್ರಮಿಸಿ'' ಎಂದು ಬಿಜೆಪಿ ಮುಖಂಡರು ಮನವಿ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ''ನಾವ್ಯಾರೂ ಕೂಡ ಟಿಕೆಟ್ ಕೊಡಲಿಕ್ಕೆ ಸಾಧ್ಯವಿಲ್ಲ. ಟಿಕೆಟ್ ನೀಡುವ ಶಕ್ತಿ ನಮ್ಮಲ್ಲಿಲ್ಲ. ಕಾರ್ಯಕರ್ತರು ಯಾರೂ ಗೊಂದಲಕ್ಕೆ ಒಳಗಾಗಬಾರದು'' ಎಂದು ಮನವಿ ಮಾಡಿದರು.
''ಪ್ರತಾಪ್ ಸಿಂಹ ಮೊದಲ ಬಾರಿ ಚುನಾವಣೆಗೆ ಬಂದಾಗ ಉತ್ತಮ ಗೆಲುವು ಕೊಟ್ಟಿದ್ದೇವೆ. ಚುನಾವಣೆ ಬಳಿಕ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅದೇ ರೀತಿ ಮೈಸೂರು ಮಹಾರಾಜರ ಕೊಡುಗೆ ದೊಡ್ಡದು. ಅವರ ಬಗ್ಗೆ ಯಾರೇ ಆದರೂ ಕೂಡ ಲಘುವಾಗಿ ಮಾತನಾಡಬಾರದು'' ಎಂದ ಅವರು, ''ಅಭ್ಯರ್ಥಿ ಘೋಷಣೆ ಮಾಡುವ ಶಕ್ತಿ ನಮಗಿಲ್ಲ. ನಾವೆಲ್ಲರೂ ಪಕ್ಷದ ಸಿಪಾಯಿಗಳು. ಯಾರು ಪಕ್ಷದ ಅಭ್ಯರ್ಥಿಯಾಗ್ತಾರೆ ಅವರನ್ನು ಗೆಲ್ಲಿಸಿಕೊಂಡು ಬರುವುದಷ್ಟೇ ನಮ್ಮ ಕೆಲಸ'' ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಸೋತವರು ಅವರ ನಡವಳಿಕೆಯಿಂದ ಸೋತಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿ, ''ನನ್ನ ನಡವಳಿಕೆ ಅನ್ನುವುದು ಅವರ ಅಭಿಪ್ರಾಯ. ನನ್ನ ನಡವಳಿಕೆಯಿಂದ ಪಕ್ಷಕ್ಕೆ ಯಾವುದೇ ರೀತಿಯ ಮುಜುಗರ ಆಗಿಲ್ಲ. ನನ್ನ ನಡವಳಿಕೆ ಸರಿಯಿಲ್ಲ ಎನ್ನುವುದಾದರೆ ನನಗೆ ನಗರಾಧ್ಯಕ್ಷ ಸ್ಥಾನ ನೀಡುತ್ತಿದ್ದರಾ?'' ಎಂದು ಪ್ರತಾಪ್ ಸಿಂಹಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಟಿಕೆಟ್ ವಿಚಾರವಾಗಿ ಮಾತನಾಡಿ ''ಡಾ. ಮಂಜುನಾಥ್, ಅಪ್ಪಚ್ಚುರಂಜನ್, ಸೇರಿದಂತೆ ಹಲವು ಟಿಕೆಟ್ ಆಕಾಂಕ್ಷಿಗಳಿದ್ದರು. ನಾವು ಅದನ್ನು ಈಶ್ವರಪ್ಪನವರು ಬಂದಾಗ ಮಾಹಿತಿ ನೀಡಿದ್ದೆವು. ಅಭ್ಯರ್ಥಿ ಯಾರಾಗಬೇಕೆಂದು ಅಂದು ಅಭಿಪ್ರಾಯ ಸಂಗ್ರಹ ಮಾಡಿದ್ದರು. ಪ್ರತಿಯೊಬ್ಬರೂ ತಮ್ಮ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದನ್ನು ಹೈಕಮಾಂಡ್ಗೆ ತಲುಪಿಸಿದ್ದಾರೆ'' ಎಂದು ತಿಳಿಸಿದರು.
ಎಸ್.ಎ. ರಾಮದಾಸ್ ಹೇಳಿಕೆ: ಮಾಜಿ ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ''ಕಳೆದ ವಿಧಾನಸಭಾ ಚುನಾವಣೆ ವೇಳೆ ನನಗು ಟಿಕೆಟ್ ಮಿಸ್ ಆಯ್ತು. ಆಗ ನಾನು ಪಕ್ಷದಲ್ಲೇ ಉಳಿದುಕೊಂಡು ಕೆಲಸ ಮಾಡಿದೆ. ಕೇಂದ್ರದಲ್ಲಿ ಇದುವರೆಗೂ ಅಭ್ಯರ್ಥಿ ಯಾರೆಂಬುದು ಅಂತಿಮವಾಗಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ಕರೆದಿದ್ದೇವೆ'' ಎಂದರು.
''ಮೈಸೂರು ಅರಸರ ಕೊಡುಗೆಗಳ ಬಗ್ಗೆ ಅಪಾರ ಗೌರವವಿದೆ. ಯದುವೀರ್ ಒಡೆಯರ್ ಅವರು ಜನರ ಜೊತೆ ಬೆರೆಯುತ್ತಾರಾ ಅಥವಾ ಇಲ್ಲವಾ ಎಂಬುದನ್ನು ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ರಾಮದಾಸ್ ಅವರು ಪಕ್ಷಕ್ಕಾಗಿ ಕೆಲಸ ಮಾಡಿದ್ದರು ಎಂದು ಪ್ರತಾಪ್ ಸಿಂಹ ಅವರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವತ್ತಿಗೂ ನಮಗೆ ಪ್ರತಾಪ್ ಸಿಂಹ ಲೀಡರ್. ಅವರಿಗೆ ಗೌರವ ಕೊಟ್ಟೆ ಕೊಡುತ್ತೇವೆ. ಅವರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ'' ಎಂದ ಅವರು, ''ನಾನು ಇನ್ನೊಬ್ಬರಿಗೆ ಪಾಠ ಮಾಡುವಷ್ಟು ದೊಡ್ಡವನಲ್ಲ. ನಾನು ಸೋತ ಬಳಿಕವು ಪಕ್ಷದ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ'' ಎಂದು ಹೇಳಿದರು.
ಕಾರ್ಯಕರ್ತರು ಮತ್ತು ಪಕ್ಷಕ್ಕೆ ಮುಜುಗರ- ಟಿ.ಎಸ್. ಶ್ರೀವತ್ಸ: ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ''ಪ್ರತಾಪ್ ಸಿಂಹಗೆ ಇನ್ನೂ ಟಿಕೆಟ್ ನಿರಾಕರಣೆ ಆಗಿಲ್ಲ. ಅವರು ನಮ್ಮ ಲೀಡರ್, ಹತ್ತು ವರ್ಷ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ಸಿಗಬಹುದು. ಬೇರೆಯವರಿಗೆ ಸಿಕ್ಕರೂ ಪ್ರತಾಪ್ ಸಿಂಹ ಕೂಡ ಕೆಲಸ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗೋದಕ್ಕಿಂತ, ನಮ್ಮ ಕಾರ್ಯಕರ್ತರು ಮತ್ತು ಪಕ್ಷಕ್ಕೆ ಮುಜುಗರ ಆಗುತ್ತದೆ. ಪ್ರತಾಪ್ ಸಿಂಹ ವಿಚಲಿತರಾಗಿ ಮಾತನಾಡಬಾರದು'' ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಜಯಪ್ರಕಾಶ್ ಹೆಗ್ಡೆ, ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆ: ಡಿಕೆಶಿ, ಪರಮೇಶ್ವರ್ ಸಮ್ಮುಖದಲ್ಲಿ ಕೈ ಹಿಡಿದ ನಾಯಕರು