ಸುಳ್ಯ (ದಕ್ಷಿಣಕನ್ನಡ): ಬಿಜೆಪಿ ಭದ್ರತಕೋಟೆಯಾಗಿರುವ ಸುಳ್ಯದಲ್ಲಿ ಕಾರ್ಯಕರ್ಯರು ತೀವ್ರ ಅಸಮಾಧಾನಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಿಜೆಪಿಯ ಭದ್ರಕೋಟೆ ಸುಳ್ಯದಲ್ಲಿ ಬಿಜೆಪಿ ಮಂಡಲ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ವೆಂಕಟ್ ವಳಲಂಬೆ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಮಂಡಲ ಸಮಿತಿ ಹಾಗೂ ಕೋರ್ ಕಮಿಟಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು,ಬಿಜೆಪಿ ಕಚೇರಿಯನ್ನೇ ಲಾಕ್ ಮಾಡಿದ ಘಟನೆ ನಡೆದಿದೆ.
ಈ ಹಿಂದಿನಿಂದಲೇ ಅಂದರೆ ಸಿ.ಎ ಬ್ಯಾಂಕ್ ಚುಣಾವಣೆಯ ನಂತರ ಬೆಳವಣಿಗೆಯಿಂದಲೇ ಇಲ್ಲಿನ ಕಾರ್ಯಕರ್ತರೊಳಗಿದ್ದ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ವಿಧಾನಸಭಾ ಚುಣಾವಣೆಯ ವೇಳೆ ಮಾಜಿ ಸಚಿವ ಎಸ್.ಅಂಗಾರ ಅವರಿಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಪಕ್ಷದ ದೋರಣೆಯಿಂದ ಬೇಸತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವೆಂಕಟ್ ವಳಲಂಬೆ ಅವರನ್ನು ಎರಡನೇ ಬಾರಿಗೆ ಸುಳ್ಯ ಮಂಡಲ ಸಮಿತಿಗೆ ಆಯ್ಕೆ ಮಾಡಿದ್ದು, ಮತ್ತೆ ಇದೀಗ ಸುಳ್ಯ ಬಿಜೆಪಿಯಲ್ಲಿ ಭಿನ್ನಮತ ಮೂಡಲು ಕಾರಣ ಎನ್ನಲಾಗಿದೆ.
ಪಕ್ಷದ ಪ್ರಮುಖರು ಸಭೆ ನಡೆಸಿ ಕೋರ್ ಕಮಿಟಿ ಶಿಫಾರಸು ಮಾಡಿದವರನ್ನು ಅಧ್ಯಕ್ಷರನ್ನಾಗಿ ಮಾಡದಿರುವುದು ಸುಳ್ಯದ ಪ್ರಮುಖರ ಅಸಮಾಧಾನಕ್ಕೆ ಕಾರಣವಾಗಿದೆ. ಭಾನುವಾರ ಕ್ಷೇತ್ರದ ಬಿಜೆಪಿ ಪ್ರಮುಖರ ಸಭೆ ಬಿಜೆಪಿ ಮಂಡಲ ಸಮಿತಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಕ್ಷೇತ್ರದ ಪ್ರಮುಖರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಮಂಡಲ ಸಮಿತಿಯಿಂದ ಅಧ್ಯಕ್ಷ ಸ್ಥಾನಕ್ಕೆ ವಿನಯ ಮುಳುಗಾಡು ಅವರ ಹೆಸರನ್ನು ಜಿಲ್ಲಾ ಸಮಿತಿಗೆ ಕಳುಹಿಸಲಾಗಿತ್ತಾದರೂ ಪಟ್ಟಿಯಲ್ಲಿ ಕಾಣಿಸದೇ ಇದ್ದ ವೆಂಕಟ್ ವಳಲಂಬೆಯವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ಸುಳ್ಯ ಬಿಜೆಪಿಯಲ್ಲಿನ ಭಿನ್ನಮತ ಜಿಲ್ಲಾ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಇನ್ನು ಈ ವೇಳೆ ಕೆಲವು ಕಾರ್ಯಕರ್ತರು ಬಿಜೆಪಿಯ ಕಚೇರಿಗೆ ಬೀಗ ಜಡಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪಕ್ಷದಲ್ಲಿ ಹಲವು ವರ್ಷಗಳಿಂದ ನಿಷ್ಠೆಯಿಂದ ದುಡಿಯುತ್ತಿರುವ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತು ಚರ್ಚೆಯಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ , ’’ಪಕ್ಷ ಸಂಘಟನೆ ನೆಲೆಯಲ್ಲಿ ಒಬ್ಬರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಇದೀಗ ಕಾರ್ಯಕರ್ತರು ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರದ ಕುರಿತಾಗಿ ಜಿಲ್ಲಾ ನಾಯಕರ ಗಮನಕ್ಕೆ ತರುತ್ತೇನೆ ಮತ್ತು ಇಂದಿನ ಬೆಳವಣಿಗೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ‘‘ ಎಂದು ಹೇಳಿಕೆ ನೀಡಿದ್ದಾರೆ.
ಓದಿ: ನಾಳೆ ವಿಶ್ವಾಸಮತಯಾಚನೆ: ಹೈದರಾಬಾದ್ನಿಂದ ಜಾರ್ಖಂಡ್ನತ್ತ ಶಾಸಕರ ಪಯಣ