ಬೆಳಗಾವಿ: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ(40) ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬುಧವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತರಿಗೆ ಓರ್ವ ಪುತ್ರ ಇದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ರೈತರು, ಕಾರ್ಮಿಕರ ಪರ ಗಟ್ಟಿದನಿಯಿಂದ ಹೋರಾಡುತ್ತಿದ್ದ ಜಯಶ್ರೀ, ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟದ ಮೂಲಕ ಗಮನ ಸೆಳೆದಿದ್ದರು. ಕಬ್ಬಿನ ಬಾಕಿ ಬಿಲ್‌ಗಾಗಿ ಸುವರ್ಣ ಸೌಧಕ್ಕೆ ಕಬ್ಬು ತುಂಬಿದ ಲಾರಿ ತೆಗೆದುಕೊಂಡು ಹೋಗುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದರು. ಆ ವೇಳೆ ಅಂದಿನ ಸಿಎಂ ಕುಮಾರಸ್ವಾಮಿ, ಜಯಶ್ರೀ ಕುರಿತು ಹಗುರವಾಗಿ ಮಾತನಾಡಿ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದರು.
ಬಳಿಕ ಜಯಶ್ರೀ ಗುರನ್ನವರ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೇ ಇಡೀ ರಾಜ್ಯದಲ್ಲಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರು, ಮಹಿಳೆಯರು ಮತ್ತು ಕಾರ್ಮಿಕರನ್ನು ಸಂಘಟಿಸುವ ಕೆಲಸ ಮಾಡಿದ್ದರು. ರೈತ ಹೋರಾಟದೊಂದಿಗೆ ನರೇಗಾ ಕೂಲಿ ಕಾರ್ಮಿಕರ ಪರವಾಗಿ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಜಯಶ್ರೀ ಗುರನ್ನವರ ನಿಧನಕ್ಕೆ ಹಲವು ರಾಜಕೀಯ ನಾಯಕರು, ರೈತ ಮುಖಂಡರು ಸಂತಾಪ ಸೂಚಿಸಿದ್ದಾರೆ. ಪಾರ್ಥಿವ ಶರೀರದ ಅಂತ್ಯಕ್ರಿಯೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ಇಂದು ನೆರವೇರಲಿದೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಡ್ಯಾಂಗಳಲ್ಲಿ ಸಂಭವಿಸಿದ ದುರಂತ, ಒಂದೇ ಕುಟುಂಬದ ಐವರು ಸೇರಿ 11 ಜನ ಸಾವು - 11 PEOPLE DIED