ಬೆಂಗಳೂರು: ''ಮಳೆ ನೀರು ಕೊಯ್ಲು ಪದ್ಧತಿಯ ಮೂಲಕ ನೀರಿನ ಸದ್ಬಳಕೆ ಕಡ್ಡಾಯ. ಆದರೆ, ಹಲವು ಕಡೆಗಳಲ್ಲಿ ಈ ನೀರನ್ನು ನೇರವಾಗಿ ಒಳಚರಂಡಿಗೆ ಸೇರಿಸುತ್ತಿರುವ ಮೂಲಕ ಒಳಚರಂಡಿ ಮೇಲೆ ಒತ್ತಡ ಹೆಚ್ಚುವಂತೆ ಮಾಡಲಾಗುತ್ತಿದೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು'' ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
''ಬೆಂಗಳೂರಿನಲ್ಲಿ ಸುರಿಯುವ ಮಳೆಯನ್ನು ಸಮರ್ಪಕವಾಗಿ ಬಳಸುವುದರಿಂದ ನಗರದ ಅಂತರ್ಜಲ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಬಹುದು. ಕೆಲವೆಡೆ ಮಳೆ ನೀರು ಕೊಯ್ಲು ಪದ್ದತಿಯ ಮೂಲಕ ಸಂಗ್ರಹಿಸಲಾದ ನೀರನ್ನು ಒಳಚರಂಡಿಗೆ ನೇರವಾಗಿ ಹರಿಬಿಡಲಾಗುತ್ತಿದೆ. ಇದರಿಂದ ಮಳೆ ನೀರು ಒಳಚರಂಡಿಗೆ ಸೇರ್ಪಡೆಗೊಂಡು ಪೋಲಾಗುವುದಲ್ಲದೇ, ಒಳಚರಂಡಿ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಿಸುತ್ತಿದೆ. ಇದನ್ನು ತಡೆಗಟ್ಟುವುದು ಹಾಗೂ ಜನರು ಮಳೆ ನೀರನ್ನು ಸಮರ್ಪಕವಾಗಿ ಹಿಡಿದು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೇವಾ ಕೇಂದ್ರಗಳ ವ್ಯಾಪ್ತಿಯಲ್ಲಿ ನೇರವಾಗಿ ಒಳಚರಂಡಿಗೆ ಮಳೆ ನೀರನ್ನು ಹರಿಸುತ್ತಿರುವ ಬಗ್ಗೆ ಸರ್ವೇ ಮಾಡಬೇಕು. ನೇರವಾಗಿ ಒಳಚರಂಡಿಗೆ ಸೇರುತ್ತಿರುವ ನೀರನ್ನು ತಡೆಗಟ್ಟಬೇಕು'' ಎಂದು ಸೂಚಿಸಿದರು.
''ಮಳೆ ನೀರು ಕೋಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ. ಆದರೆ, ಇದುವರೆಗೂ ಅಳವಡಿಸಿಕೊಳ್ಳದೇ ಇರುವ ಕಟ್ಟಡಗಳ ಜಲಮಂಡಳಿಯ ವತಿಯಿಂದ ಸಮೀಕ್ಷೆ ನಡೆಸಲಾಗುವುದು. ಈ ಮೂಲಕ ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಳ್ಳದೇ ಇರುವ ಹಾಗೂ ಅಳವಡಿಸಿಕೊಳ್ಳುವ ಮೂಲಕ ಆಗುತ್ತಿರುವ ಅನುಕೂಲತೆಗಳ ಬಗ್ಗೆ ಮಾಹಿತಿ ಕ್ರೋಢೀಕರಿಸಲಾಗುವುದು'' ಎಂದು ಅವರು ಹೇಳಿದರು.
ಇದನ್ನೂ ಓದಿ: ಪ್ರಜ್ವಲ್ಗೆ ಬೇರೆ ಆಯ್ಕೆಗಳಿದ್ದಿಲ್ಲ, ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ: ಡಿಸಿಎಂ ಡಿ ಕೆ ಶಿವಕುಮಾರ್ - DCM D K Shivakumar