ಧಾರವಾಡ : ಪತ್ರಿಕೋದ್ಯಮ ಕ್ಷೇತ್ರ ಅಗಾಧವಾಗಿ ಬೆಳೆದಿದ್ದು, ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಪತ್ರಿಕೋದ್ಯಮದ ಪಾತ್ರ ಬಹಳ ಇದೆ ಎಂದು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗ ಮತ್ತು ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ 'ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಮೂಹ ಸಂವಹನದ ಸವಾಲುಗಳು ಮತ್ತು ಅವಕಾಶಗಳು' ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ರೈನ್ ಬೋ ಮಾಧ್ಯಮ ಹಬ್ಬ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ವಿವಿ ಪತ್ರಿಕೋದ್ಯಮ ಹಳೆಯ ವಿದ್ಯಾರ್ಥಿ ಸಾಧಕರಿಗೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಒಕ್ಕೂಟದ ವೆಬ್ಸೈಟ್ ಲೋಕಾರ್ಪಣೆ ಮಾಡಿ ಮಾತನಾಡಿದರು.
'ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರು ಅಂಗಗಳನ್ನು ಮೀರಿ ಪತ್ರಿಕಾ ಕ್ಷೇತ್ರ ಬಹಳ ಮುಖ್ಯವಾಗಿದೆ. ಕವಿವಿ ಪತ್ರಿಕೋದ್ಯಮ 40 ವರ್ಷಗಳಲ್ಲಿ ನಾಡಿಗೆ ಬಹಳಷ್ಟು ಪತ್ರಕರ್ತರನ್ನು ನೀಡಿದೆ ಎಂದರು. ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಬಹಳ ಇದೆ. ಕವಿವಿ ಪತ್ರಿಕೋದ್ಯಮ ವಿಭಾಗ ತನ್ನದೇ ಆದ ಛಾಪು ಮೂಡಿಸಿದೆ. ಮಾಧ್ಯಮದಿಂದ ಸಂಸ್ಕಾರ, ಸಂಸ್ಕೃತಿ, ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಪತ್ರಿಕೋದ್ಯಮ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ' ಎಂದರು.
ಮಾಧ್ಯಮೋತ್ಸವದಲ್ಲಿ ಭವಿಷ್ಯದ ಪತ್ರಿಕೋದ್ಯಮವನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಳುವ ದಿನಗಳು ದೂರವಿಲ್ಲ ಎನ್ನುವ ವಿಷಯ ಮಂಡನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎ. ಎಸ್ ಬಾಲಸುಬ್ರಹ್ಮಣ್ಯ ಬರೆದ 'ಪತ್ರಿಕೋದ್ಯಮದ ಪಲ್ಲಟಗಳು' ಮತ್ತು ಹಳೆಯ ವಿದ್ಯಾರ್ಥಿಗಳ ಲೇಖನ ಸಂಗ್ರಹ 'ಮಾಧ್ಯಮ ಕ್ಷಿತಿಜ' ಎಂಬ ಗ್ರಂಥಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕವಿವಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ. ಎಸ್ ಬಾಲಸುಬ್ರಹ್ಮಣ್ಯ ಮಾತನಾಡಿ, 'ಮಾಧ್ಯಮ ಕ್ಷೇತ್ರಕ್ಕೆ ಬರುವವರು ಭಾಷೆಯ ಮೇಲೆ ಹಿಡಿತ, ತಂತ್ರಜ್ಞಾನ ಕಲಿಯುವುದು ಬಹಳ ಮುಖ್ಯ ಎಂದ ಅವರು, ಪ್ರಸ್ತುತ ಮಾಧ್ಯಮ ಭಿನ್ನವಾಗಿ ಬೆಳೆಯುತ್ತಿದೆ. ಆದ್ದರಿಂದ ಇಂದು ವಾಕ್ ಚಾತುರ್ಯ ಬಹಳ ಮುಖ್ಯವಾಗಿದೆ. ಓದುಗರನ್ನು ಮತ್ತು ವೀಕ್ಷಕರನ್ನು ಆಕರ್ಷಿಸುವ ತಂತ್ರಗಾರಿಕೆಯನ್ನು ಕಲಿಯಬೇಕು' ಎಂದು ಹೇಳಿದರು.
ಕವಿವಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ ಗಂಗಾಧರಪ್ಪ ಮಾತನಾಡಿ, 'ಪ್ರಾರಂಭದಲ್ಲಿ ಕವಿವಿ ಪತ್ರಿಕೋದ್ಯಮ ವಿಭಾಗವು ಅನೇಕ ಸವಾಲುಗಳನ್ನು ಎದುರಿಸಿ ಇಂದು 40 ವರ್ಷ ಪೂರೈಸಿರುವುದು ಸಂತಸದ ಸಂಗತಿ, ಧೈರ್ಯದಿಂದ ಮುನ್ನುಗ್ಗಿ ಎಂದು' ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಕೆ.ಬಿ ಗುಡಸಿ ಮಾತನಾಡಿ, 'ವಿದ್ಯಾರ್ಥಿಗಳು ಕಲಿಕೆ ಮೂಲಕ ತಮ್ಮದೇ ಆದ ಛಾಪನ್ನು ಮಾಧ್ಯಮ ಕ್ಷೇತ್ರದಲ್ಲಿ ರೂಢಿಸಿಕೊಳ್ಳಬೇಕು' ಎಂದರು.
ಇದೇ ಸಂದರ್ಭದಲ್ಲಿ ಕವಿವಿ ಪತ್ರಿಕೋದ್ಯಮ ವಿಭಾಗದ 40 ವರ್ಷಗಳ ನಡೆದುಬಂದ ಹಾದಿ ಕುರಿತು ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿ ಪ್ರದರ್ಶಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ವಿಭಾಗದಲ್ಲಿ ವ್ಯಾಸಂಗ ಮಾಡಿದ ಹಲವರು ಭಾಗವಹಿಸಿದ್ದರು.
ಸಾಧಕರಿಗೆ ಸನ್ಮಾನಿಸಿದ ಬಸವರಾಜ ಹೊರಟ್ಟಿ: ಕವಿವಿ ಪತ್ರಿಕೋದ್ಯಮ ವಿಭಾಗ ಕಳೆದ 40 ವರ್ಷದಿಂದ ವಿವಿಧ ಪತ್ರಕರ್ತರನ್ನು ರೂಪಿಸಿದೆ. ಹೀಗಾಗಿ ಸಾಧಕರನ್ನು ಗುರುತಿಸಿ ಈ ಸನ್ಮಾನ ಕೂಡ ಮಾಡಲಾಯಿತು. ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಕವಿಪವಿ ಕೂಟದ ವೆಬ್ಸೈಟ್ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಲಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ, ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ಕೆ ರವಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಜೆ. ಎಂ ಚಂದುನವರ, ಧಾರವಾಡ ಮತ್ತು ಬೆಂಗಳೂರು ಕವಿಪವಿ ಘಟಕದ ಅಧ್ಯಕ್ಷರಾದ ಡಾ. ರಾಜು ವಿಜಾಪೂರ, ಪ್ರವೀಣ ಶಿರಿಯಣ್ಣವರ, ಸೇರಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.