ಬೆಂಗಳೂರು: ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ. ಬಾಲಕಿಯನ್ನು ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಬಿ.ಪ್ರಭಾಕರ ಶಾಸ್ತ್ರಿ ಮತ್ತು ಉಮೇಶ್ ಎಂ ಅಡಿ ಅವರಿದ್ದ ನ್ಯಾಯಪೀಠ, ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಪೋಕ್ಸೋ ಕಾಯಿದೆ ಸೆಕ್ಷನ್ 6ರ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ಮತ್ತು ಐಪಿಸಿ 366ರ ಅಡಿ 5 ವರ್ಷ ಶಿಕ್ಷೆ, 5 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಮುಂದಿನ 45 ದಿನಗಳಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಲು ಆರೋಪಿಗೆ ಪೀಠ ನಿರ್ದೇಶನ ನೀಡಿದೆ. ದಂಡದ ರೂಪದಲ್ಲಿ ಪಡೆದ 50 ಸಾವಿರ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು ಎಂದು ಪೀಠ ಇದೇ ವೇಳೆ, ನಿರ್ದೇಶನ ನೀಡಿದೆ. ಇದೇ ವೇಳೆ, ಪ್ರಕರಣದ ಇತರೆ ಆರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಪೀಠ ಎತ್ತಿಹಿಡಿದಿದೆ.
ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಸಾಕ್ಷ್ಯಾಧಾರವನ್ನಾಗಿ ಪಡಿಗಣಿಸಬಹುದಾಗಿದೆ ಎಂದು ಪೋಲ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ಪಡಿಸಿದೆ. ವಿಚಾರಣಾ ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ಸೂಕ್ತ ರೀತಿಯಲ್ಲಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಈ ಬೆಳವಣಿಗೆ ಫೋಕ್ಸೋ ಕಾಯ್ದೆಯ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ಪೀಠ ತಿಳಿಸಿದೆ.
ಪ್ರಕರಣದಲ್ಲಿ ಸಂತ್ರಸ್ತೆ ಪಾಟಿ ಸವಾಲು ಸಂದರ್ಭದಲ್ಲಿ ಆರೋಪಿಯ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಈ ಹೇಳಿಕೆಗಳು ಸುಳ್ಳು ಎಂಬುದಾಗಿ ಆರೋಪಿ ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ನೀಡಿಲ್ಲ. ಆರೋಪಿಯ ವಿರುದ್ಧ ದುರುದ್ದೇಶಪೂರ್ವಕವಾಗಿ ದೂರು ನೀಡಿದ್ದಾರೆ ಎಂಬುದನ್ನೂ ತಿಳಿಸಿಲ್ಲ. ಆದರೂ, ಸಂತ್ರಸ್ತೆಯ ಹೇಳಿಕೆಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಪೈಂಟರ್ ಆಗಿರುವ ಆರೋಪಿ 2013ರ ಅಕ್ಟೋಬರ್ 13ರಂದು ದ್ವಿಚಕ್ರ ವಾಹನದಲ್ಲಿ ಬಾಲಕಿಯನ್ನು ಅಪಹರಣ ಮಾಡಿದ್ದರು. ಅಲ್ಲದೆ, ನನ್ನನ್ನು ನಿರಾಕರಿಸಿದಲ್ಲಿ ವಿಷ ತೆಗೆದುಕೊಂಡು ಸಾಯುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು. ಬಳಿಕ ಪಿರಿಯಾಪಟ್ಟಣ ತಾಲೂಕಿನ ಹುಣಸೂರು ಸೇರದಂತೆ ವಿವಿಧ ಗ್ರಾಮಗಳಲ್ಲಿ ತಂಗಿ ಸುಮಾರು 10 ದಿನಗಳ ಕಾಲ ಅತ್ಯಾಚಾರ ವೆಸಗಿದ್ದರು. ಈ ಕುರಿತಂತೆ ಮಾಹಿತಿ ಪಡೆದಿದ್ದ ಸಂತ್ರಸ್ತೆಯ ಪೋಷಕರು ನಗರದ ವಿವಿ ಪುರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪೋಕ್ಸೋ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ 2016ರ ಅಕ್ಟೋಬರ್ 4 ರಂದು ಆರೋಪಿ ಸೇರಿದಂತೆ ಇತರ ಆರು ಮಂದಿಯನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಆಕ್ಷೇಪಾರ್ಹ ಹೇಳಿಕೆಗೆ ಬೇಷರತ್ ಕ್ಷಮೆ: ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಹಿಂಪಡೆದ ಹೈಕೋರ್ಟ್