ದಾವಣಗೆರೆ: ಚನ್ನಗಿರಿ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಕಳೆದ ದಿನ ನಡೆದಿದೆ. ವ್ಯಕ್ತಿಯ ಸಂಬಂಧಿಕರು, ಪೊಲೀಸರೇ ಇವನ ಸಾವಿಗೆ ಕಾರಣವೆಂದು ಆರೋಪಿಸಿ ಠಾಣೆಗೆ ಮುತ್ತಿಗೆ ಹಾಕಿದ್ದರು. ಕಳೆದ ರಾತ್ರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ವಾತಾವರಣ ಶಾಂತವಾಗಿದ್ದು, ಮರಣೋತ್ತರ ಪರೀಕ್ಷೆಯೂ ಪೂರ್ಣಗೊಂಡಿದೆ.
ನ್ಯಾಯಮೂರ್ತಿ ಪ್ರಶಾಂತ್ ಅವರ ನೇತೃತ್ವದಲ್ಲಿ ಮೃತ ಆದಿಲ್ ಮರಣೋತ್ತರ ಪರೀಕ್ಷೆ ನಡೆದಿದೆ. ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆ ನಡೆಯಿತು. ರಾಜ್ಯದ ಬಹುಸೂಕ್ಷ್ಮ ಪ್ರಕರಣ ಆಗಿರುವುದರಿಂದ ಕುಟುಂಬ ಸದಸ್ಯರು, ಹಿರಿಯ ಪೊಲೀಸ್ ಅಧಿಕಾರಿಗಳು, ಜೊತೆಗೆ ನ್ಯಾಯಮೂರ್ತಿ ಪ್ರಶಾಂತ್ ಅವರು ಶವಾಗಾರಕ್ಕೆ ಭೇಟಿ ನೀಡಿದ್ದರು. ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿರುವ ಹಿನ್ನೆಲೆ, ನ್ಯಾಯಮೂರ್ತಿ ಸಮ್ಮುಖದಲ್ಲಿ ಶವಪರೀಕ್ಷೆ ನಡೆಸಲಾಯಿತು.
ಇದನ್ನೂ ಓದಿ: ಚನ್ನಗಿರಿಯಲ್ಲಿ ಆರೋಪಿ ಸಾವು ಪ್ರಕರಣ: 5 ವಾಹನಗಳಿಗೆ ಹಾನಿ, 11 ಪೊಲೀಸ್ ಸಿಬ್ಬಂದಿಗೆ ಗಾಯ - DAVANAGERE SP REACTION
ಚನ್ನಗಿರಿಯಲ್ಲಿ ಪೊಲೀಸ್ ಬಂದೋಬಸ್ತ್: ಘಟನೆ ತಿವ್ರ ಸ್ವರೂಪ ಪಡೆದಿದ್ದ ಹಿನ್ನೆಲೆ ಚನ್ನಗಿರಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಿವಮೊಗ್ಗ ಎಸ್ಪಿ ಮಿಥುನ್, ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಠಾಣೆ ಮೇಲೆ ಕಲ್ಲು ತೂರಿರುವ ಹಿನ್ನೆಲೆ ಸದ್ಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹಾಗಾಗಿ ಪಟ್ಟಣಕ್ಕೆ ಮೂರು ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಸೇರಿ ಮೂರು ಜಿಲ್ಲೆಗಳಿಂದ ಸರ್ಕಲ್ ಇನ್ಸ್ಪೆಕ್ಟರ್, ಡಿವೈಎಸ್ಪಿ, ಎಸ್ಪಿ ಹಂತದ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಚನ್ನಗಿರಿ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು: ಲಾಕಪ್ ಡೆತ್ ಆರೋಪ, ಠಾಣೆ ಎದುರು ಬಿಗುವಿನ ವಾತಾವರಣ - Accused Death