ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಆರೋಪಿ ಸಹಿತ ನಾಲ್ವರನ್ನ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮನೋಜ್, ತರುಣ್, ಕಿರಣ್ ಹಾಗೂ ಓರ್ವ ಅಪ್ರಾಪ್ತನನ್ನ ಬಂಧಿಸಲಾಗಿದೆ. ಆರೋಪಿಗಳು ಮೇ 12ರಂದು ಬಾಪೂಜಿನಗರದ ಮಧುರ ಫ್ಯಾಮಿಲಿ ರೆಸ್ಟೋರೆಂಟ್ & ಬಾರ್ ಬಳಿ ವಿಜಯ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು.
ಘಟನೆಗೆ ಕಾರಣವೇನು..? ಬ್ಯಾಂಕ್‌ವೊಂದರಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡಿಕೊಂಡಿದ್ದ ಹಲ್ಲೆಗೊಳಗಾದ ವಿಜಯ್ ಹಾಗೂ ಆರೋಪಿ ಮನೋಜ್ ಸ್ನೇಹಿತರು. ಒಂದು ತಿಂಗಳ ಹಿಂದೆ ರಾತ್ರಿ 11 ಗಂಟೆ ಸುಮಾರಿಗೆ ಹೊಸಗುಡ್ಡದಹಳ್ಳಿ ಬಳಿ ವಿಜಯ್ ಮೊಬೈಲ್ ನೋಡುತ್ತಾ ನಿಂತಿದ್ದಾಗ ಆಟೋದಲ್ಲಿ ಬಂದಿದ್ದ ಮನೋಜ್, ಆತನ ಮೊಬೈಲ್ ಕಸಿದುಕೊಂಡು ಹೋಗಿದ್ದ. ಬಳಿಕ ತಮಾಷೆಗಾಗಿ ಹಾಗೆ ಮಾಡಿದೆ ಎಂದು ಮೊಬೈಲ್ ಫೋನ್ ವಾಪಸ್ ತಂದುಕೊಟ್ಟಿದ್ದ. ಮೇ 12ರಂದು ಬಾಪೂಜಿನಗರದ ಮಧುರ ಫ್ಯಾಮಿಲಿ ರೆಸ್ಟೋರೆಂಟ್ & ಬಾರ್ ಬಳಿ ಸೇರಿದ್ದ ವಿಜಯ್ ಹಾಗೂ ಮನೋಜ್ ಮತ್ತು ಸ್ನೇಹಿತರು ಒಟ್ಟಿಗೆ ಹರಟುತ್ತಾ ಮದ್ಯಪಾನ ಮಾಡಿದ್ದರು. ಇದೇ ವೇಳೆ ಮೊಬೈಲ್ ಫೋನ್ ಕಸಿದುಕೊಂಡು ಹೋಗಿದ್ದ ವಿಚಾರ ಪ್ರಸ್ತಾಪಿಸಿದ್ದ ವಿಜಯ್, 'ಆ ದಿನ ನೀನು ಮಾಡಿದ್ದು ಸರಿಯಾ?' ಎಂದು ಕೇಳಿದ್ದ. ಆಗ 'ಮೊಬೈಲ್ ಕಸಿದುಕೊಂಡಿದ್ದು ನಾನಲ್ಲ, ಮತ್ತೋರ್ವ. ಆತನನ್ನೇ ಕರೆಸುತ್ತೇನೆ, ಮಾತನಾಡೋಣ' ಎಂದು ತೆರಳಿದ್ದ.
ಇದಾದ ಕೆಲವೇ ನಿಮಿಷಗಳಲ್ಲಿ ಸ್ನೇಹಿತರೊಂದಿಗೆ ಬಂದಿದ್ದ ಮನೋಜ್, 'ಮೊಬೈಲ್ ವಿಚಾರವನ್ನ ಎಷ್ಟು ಸಾರಿ ಹೇಳ್ತೀಯಾ? ನಾನು ಸಿಕ್ಕಾಗೆಲ್ಲ ಅದನ್ನೇ ಹೇಳಿ ಅವಮಾನ ಮಾಡ್ತೀಯಾ?' ಎನ್ನುತ್ತಾ ತನ್ನ ಬಳಿಯಿದ್ದ ಮಾರಕಾಸ್ತ್ರ ಬೀಸಿದ್ದ. ಜೊತೆಗೆ ಆತನ ಸ್ನೇಹಿತರು ಸಹ ವಿಜಯ್ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ರೆಸ್ಟೊರೆಂಟ್ ಒಳಗೆ ಓಡಿಹೋಗಿ ವಿಜಯ್ ತಪ್ಪಿಸಿಕೊಂಡಿದ್ದ. ತಲೆ, ಬೆನ್ನು, ಎಡಗೈಗೆ ತೀವ್ರವಾಗಿ ಗಾಯಗೊಂಡಿದ್ದ ವಿಜಯ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.
ಚೇತರಿಸಿಕೊಂಡ ವಿಜಯ್ ಹೇಳಿಕೆಯನ್ನ ಆಧರಿಸಿ ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಪೊಲೀಸರು, ತನಿಖೆ ಕೈಗೊಂಡು ಸದ್ಯ ಓರ್ವ ಅಪ್ರಾಪ್ತನ ಸಹಿತ ನಾಲ್ವರನ್ನ ಬಂಧಿಸಿರುವುದಾಗಿ ತಿಳಿಸಿದ್ದಾರೆ.