ಕಡಬ : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರ್ ತಾಲೂಕಿನ ಎಂಬಿಎ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಈತನ ಟಾರ್ಗೆಟ್ ಆಗಿದ್ದಳು ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಜೊತೆಗೆ ಪಕ್ಕದಲ್ಲಿ ಇದ್ದ ಇನ್ನಿಬ್ಬರು ಸಹಪಾಠಿ ವಿದ್ಯಾರ್ಥಿನಿಯರಿಗೂ ಆ್ಯಸಿಡ್ ಬಿದ್ದಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕಿನವನಾದ ಆರೋಪಿ ಆಬೀನ್ ಸೋಮವಾರ ಕಾಲೇಜು ಯುನಿಫಾರ್ಮ್ ಧರಿಸಿ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬಂದಿದ್ದಾನೆ. ಈ ವೇಳೆ ಗಣಿತ ಪರೀಕ್ಷೆಗೆ ಕೊನೆಯ ತಯಾರಿಗಾಗಿ ಮೂವರು ವಿದ್ಯಾರ್ಥಿನಿಯರು ಓದುವುದರಲ್ಲಿ ಮಗ್ನರಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದಿದ್ದ ಆಬೀನ್ ಕೈಯಲ್ಲಿದ್ದ ಆ್ಯಸಿಡ್ನ್ನ ವಿದ್ಯಾರ್ಥಿನಿಯರ ಮುಖಕ್ಕೆ ಎರಚಿ ಪರಾರಿಯಾಗಲು ಯತ್ನಿಸಿದ್ದಾನೆ.
ವಿದ್ಯಾರ್ಥಿನಿಯರ ಬೊಬ್ಬೆ ಕೇಳಿ ಓಡಿ ಬಂದ ಇತರ ವಿದ್ಯಾರ್ಥಿಗಳು, ತಪ್ಪಿಸಿಕೊಂಡು ಓಡಲು ಯತ್ನಿಸುತ್ತಿದ್ದ ಆರೋಪಿ ಆಬೀನ್‌ನನ್ನು ಹಿಡಿದು ಕಡಬ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಕಾರ್ಯಪ್ರವರ್ತರಾದ ಕಡಬ ಠಾಣಾಧಿಕಾರಿ ಅಭಿನಂದನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿನಿಯರನ್ನು ಸುಟ್ಟ ಗಾಯಗಳೊಂದಿಗೆ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಎಸ್ಪಿ, ಡಿವೈಎಸ್ಪಿ, ಎಸಿ ಸೇರಿದಂತೆ ಅಧಿಕಾರಿಗಳ ಭೇಟಿ: ಘಟನೆಯ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಡಿವೈಎಸ್‌ಪಿ ಅರುಣ್ ನಾಗೇಗೌಡ ಹಾಗೂ ಪುತ್ತೂರು ಉಪವಿಭಾಗಾಧಿಕಾರಿ ಜೊಬಿನ್ ಮಹಾಪಾತ್ರ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ. ಡಿ ಸೇರಿದಂತೆ ಅಧಿಕಾರಿಗಳ ತಂಡವೇ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳು ಇತರ ವಿದ್ಯಾರ್ಥಿಗಳಿಗೆ ಈ ಘಟನೆಯಿಂದಾಗಿ ಧೃತಿಗೆಡದೇ ಧೈರ್ಯದಿಂದ ಇರುವಂತೆ ಮತ್ತು ತಮ್ಮ ಬೆಂಬಲಕ್ಕೆ ಅಧಿಕಾರಿಗಳು ಸದಾ ಸನ್ನದ್ದರಿರುವುದಾಗಿ ಧೈರ್ಯ ತುಂಬಿದರು.
ಇದನ್ನೂ ಓದಿ : ಕೇರಳದಿಂದ ಬಂದು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ, ತನಿಖೆ ನಡೆಯುತ್ತಿದೆ: ಸಚಿವ ಗುಂಡೂರಾವ್