ಹಾವೇರಿ: ಸೋಲಿನ ಭೀತಿಯಿಂದ ಕಾಂಗ್ರೆಸ್ ಅಕೌಂಟ್ ಸೀಜ್ ಮಾಡಿದ್ದಾರೆ ಎಂಬ ಕಾಂಗ್ರೆಸ್ನವರ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಸವಣೂರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮೊದಲು ಅಧಿಕೃತ ಪ್ರತಿಪಕ್ಷದ ನಾಯಕರಾಗಲಿ ಎಂದು ಸವಾಲು ಹಾಕಿದ್ದಾರೆ. ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸ್ಥಿತಿ ಹೇಗಿದೆ. ಇಡಿ ದೇಶದಲ್ಲಿ ಮೂರು ರಾಜ್ಯಗಳಲ್ಲಿ ಅವರು ಅಧಿಕಾರದಲ್ಲಿದ್ದಾರೆ. ಒಂದು ರಾಜ್ಯ ಅವರ ಆಂತರಿಕ ಬೇಗುದಿಗಳಿಂದಾಗಿ ಕೈ ಬಿಟ್ಟು ಹೋಗಿದೆ ಎಂದು ಜೋಶಿ ಆರೋಪಿಸಿದರು.
ಲೋಕಸಭೆ ಚುನಾವಣಿ ಸಮೀಕ್ಷೆಗಳ್ಯಾವವೂ ಬಿಜೆಪಿ ಪಕ್ಷದ ಸಮೀಕ್ಷೆಗಳಲ್ಲ. ಸಮೀಕ್ಷೆಗಳಲ್ಲಿ ಕಾಂಗ್ರೆಸ್ 50 ಸ್ಥಾನಕ್ಕಿಂತ ಹೆಚ್ಚು ಸ್ಥಾನಗಳಿಸುವುದಿಲ್ಲ ಎಂದು ಹೇಳಿವೆ. ಮಮತಾ ಬ್ಯಾನರ್ಜಿ ಚಾಲೆಂಜ್ ಹಾಕಿದ್ದಾರೆ. 42 ಕ್ಕಿಂತ ಹೆಚ್ಚು ಸ್ಥಾನ ಗೆದ್ದು ತೋರಿಸಲಿ ಎಂದು ಮಮತಾ ಬ್ಯಾನರ್ಜಿಗೆ ಚಾಲೆಂಜ್ ಮಾಡಿದ್ದಾರೆ ಎಂದು ಜೋಶಿ ತಿಳಿಸಿದರು.
ಕಾಂಗ್ರೆಸ್‌ನವರು ಮೊದಲು ತಮ್ಮ ಇಂಡಿಯಾ ಘಟಬಂಧನ ಸರಿಮಾಡಿಕೊಳ್ಳಲಿ. ಆ ಮೇಲೆ ಬಿಜೆಪಿ ನಾಯಕರ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಲಿ ಎಂದು ಜೋಶಿ ತಿಳಿಸಿದರು. ರಾಜ್ಯದಲ್ಲಿ 136 ಸ್ಥಾನ ಗೆದ್ದಿದ್ದೇವಿ ಎಂದು ಬೀಗ್ತಾ ಇದ್ದಾರೆ. ನಿಮ್ಮಲ್ಲಿ ಏನೇನು ಆಂತರಿಕ ಜಗಳ ಆಗುತ್ತೆ ಅನ್ನೋದನ್ನ ನೆನಪಿಟ್ಟುಕೊಳ್ಳಿ. ಅಕೌಂಟ್ ಸೀಜ್ ಮಾಡಿ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಕಾಂಗ್ರೆಸಿಗರು ಆರೋಪ ಮಾಡುತ್ತಿದ್ದಾರೆ. ಈಗ ಚುನಾವಣಾ ನೀತಿ ಸಂಹಿತಿ ಇದೆ. ಸರ್ಕಾರದ್ದೇನೂ ನಡೆಯುವುದಿಲ್ಲ ಎಂದು ಜೋಶಿ ತಿಳಿಸಿದರು.
ಇನ್ಕಮ್ ಟ್ಯಾಕ್ಸ್‌ನವರು ನೋಟಿಸ್ ನೀಡಿದ್ದಾರೆ. ಕಾಂಗ್ರೆಸ್ಸಿಗರು ನೋಟಿಸ್ ಇಗ್ನೋರ್ ಮಾಡಿದ್ದಾರೆ. ಟ್ಯಾಕ್ಸ್ ತುಂಬದೇ ಇದ್ದರೆ ನಿಮ್ಮನ್ನು ಬಿಡ್ತಾರಾ ನಮ್ಮನ್ನು ಬಿಡ್ತಾರಾ ಎಂದು ಜೋಶಿ ಪ್ರಶ್ನಿಸಿದರು. ಕಾಂಗ್ರೆಸ್ನವರಿಗೆ ತಾವು ಕಾನೂನಿಗಿಂತ ಅತೀತರು ಎಂಬ ಭಾವನೆ ಇದೆ. ಕಾನೂನು ಎಲ್ಲಿವರೆಗೂ ಒಂದೇ ಎನ್ನುವುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳ ಬೇಕು. ಇವರ ಟ್ಯಾಕ್ಸ್ ತುಂಬಿಲ್ಲ ಇನ್ಕಮ್ ಟ್ಯಾಕ್ಸನವರಿಗೆ ಅಧಿಕಾರವಿದೆ. ಹೀಗಾಗಿ ಅವರ ಅಕೌಂಟನಲ್ಲಿರುವ ಹಣ ತಗೆದುಕೊಂಡಿದ್ದಾರೆ ಎಂದು ಜೋಶಿ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಮೇಲಿಂದ ಸೂಚನೆ ಬಂದಿರುತ್ತೆ. ಅದಕ್ಕೆ ಈ ರೀತಿ ಹೇಳುತ್ತಿದ್ದಾರೆ. ಸಿಎಂ ಪಟ್ಟ ಉಳಿಯಬೇಕು ಎಂಬ ಕಾರಣಕ್ಕೆ ಅವರು ಹಾಗೇ ಹೇಳಿಕೆ ಕೊಡ್ತಿದ್ದಾರೆ. ರಾಹುಲ್ ಗಾಂಧಿ ಏನು ಹೇಳುತ್ತಾರೆ. ಅದನ್ನೇ ಸಿದ್ದರಾಮಯ್ಯ ಹೇಳುತ್ತಾರೆ ಎಂದು ಜೋಶಿ ಆರೋಪಿಸಿದರು. ರಾಹುಲ್ ಗಾಂಧಿಗೆ ಏನೂ ಗೊತ್ತಿಲ್ಲ. ಬರೆದುಕೊಟ್ಟಿದ್ದನ್ನ ಹೇಳುತ್ತಾರೆ. ಹೊಸದನ್ನು ಬರೆದುಕೊಡುವವರೆಗೂ ಟೇಪ ರಿಕಾರ್ಡರ್ ತಿರುಗುತ್ತಾ ಇರುತ್ತೆ ಎಂದು ಜೋಶಿ ವ್ಯಂಗ್ಯವಾಡಿದರು. ರಾಹುಲ್ ಗಾಂಧಿಗೆ ಏನೂ ತಿಳಿಯೋದಿಲ್ಲ. ಆದರೆ ದುರ್ದೈವ್ ಏನು ಅಂದರೆ ರಾಹುಲ್ ಗಾಂಧಿ ದಾರಿಯಲ್ಲೇ ಸಿದ್ದರಾಮಯ್ಯ ಹೋಗುತ್ತಿರುವುದು ಬಹುದೊಡ್ಡ ದುರಂತ ಎಂದು ಜೋಶಿ ಅಭಿಪ್ರಾಯಪಟ್ಟರು.
ಡಿಎಂಕೆ ಬಗ್ಗೆ ಇವರೆಲ್ಲ ಈಗ ಏನು ಹೇಳ್ತಾರೆ?: ಡಿಎಂಕೆ ಪಕ್ಷದವರು ಈಗಾಗಲೇ ತಮ್ಮ ಪ್ರಣಾಳಿಕೆ ಪ್ರಕಟಿಸಿದ್ದಾರೆ. ಇಂಡಿಯಾ ಘಟಬಂಧನ್ ಅಧಿಕಾರಕ್ಕೆ ಬಂದರೆ ಮೇಕೆದಾಟು ಬಿಡಲ್ಲ ಅಂತಾ. ಕಾಂಗ್ರೆಸ್‌ನವರು ಮೇಕೆದಾಟುಗಾಗಿ ಪಾದಯಾತ್ರೆ ಮಾಡಿದ್ರಿ. ಈಗ ಏನು ಹೇಳುತ್ತಾ ಇದ್ದೀರಿ. ಮೇಕೆದಾಟು ವಿಚಾರದಲ್ಲಿ ಇಂಡಿಯಾ ಘಟಬಂಧನ ನಿಲುವೇನು. ನಾನು ನೀರಾವರಿ ಸಚಿವ ಆಗಿರುವುದೇ ಮೇಕೆದಾಟು ಮಾಡಲು ಎಂದು ಡಿಕೆಶಿ ಹೇಳುತ್ತಾರೆ. ಹಾಗಾದರೆ ಇಂಡಿಯಾ ಘಟಬಂಧನದಿಂದ ಡಿಎಂಕೆ ಹೊರಗೆ ಹಾಕಿ ಎಂದು ಜೋಶಿ ಸವಾಲು ಕೂಡಾ ಹಾಕಿದರು.
ಅಲ್ಲಿ ಕಾಂಗ್ರೆಸ್ ಡಿಎಂಕೆ ಅಲೈಯನ್ಸ್, ಆದರೆ ಇಲ್ಲಿ ಡ್ರಾಮಾ ಮಾಡುತ್ತಿದ್ದೀರಾ ನೀವು ಎಂದು ಜೋಶಿ ಆರೋಪಿಸಿದರು. ಅಧಿಕಾರದಲ್ಲಿ ಇದ್ದಾಗ ಒಂದು ತರಹ, ಅಧಿಕಾರ ಇಲ್ಲದಾಗ ಒಂದು ತರಹ ಇರುತ್ತೀರಿ. ಮಹದಾಯಿ ಬಗ್ಗೆಯೂ ಹೀಗೆ ಹೇಳಿದ್ದರು. ಒಂದು ಹನಿ ನೀರು ಕೊಡಲ್ಲ ಎಂದು ಸೋನಿಯಾ ಗಾಂಧಿ ಗೋವಾದಲ್ಲಿ ವೀರಾವೇಶ ಮಾತನಾಡಿದ್ದರು. ಇದು ಅವರ ಬದ್ದತೆ ತೋರಿಸುತ್ತದೆ. ಆಪೋಸಿಷನ್ನಲ್ಲಿ ಇದ್ದಾಗ ಡ್ರಾಮಾ ಮಾಡುವುದು ಅಧಿಕಾರದಲ್ಲಿದ್ದಾಗ ದಿಕ್ಕು ತಪ್ಪಿಸೋದೇ ಅವರ ಕೆಲಸ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಆಪರೇಷನ್ ಕಮಲ ಆರೋಪದ ಬಗ್ಗೆ ಮಾತನಾಡಿದ ಜೋಶಿ, ನಾವು ಆಪರೇಷನ್ ಕಮಲ ಮಾಡಿದ್ರೆ ಅವರ ಸರ್ಕಾರ ಇರುತ್ತಿರಲಿಲ್ಲ. ಯಾವ ಆಪರೇಷನ್ ಕಮಲವೂ ಮಾಡಿಲ್ಲ. ಅವರಲ್ಲಿಯೇ ಭಿನ್ನಮತ, ಒಳಬೇಗುದಿ ಇದೆ, ಸಿದ್ದರಾಮಯ್ಯ ಮತ್ತು ಡಿಕೆಶಿ ನಡುನೆ ಬಹಳ ಭಿನ್ನಾಭಿಪ್ರಾಯ ಇದೆ. ಹೀಗಾಗಿ ಹೆದರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಜೋಶಿ ತಿಳಿಸಿದರು.
ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿದೆಯಾ? ಸಿದ್ದರಾಮಯ್ಯ ಡಿಕೆಶಿ ನಡುವಿನ ಹೊಡೆದಾಟ ಜಗಜ್ಜಾಹಿರಾಗಿದೆ. ಮೂರು ಜನರನ್ನ ಡಿಸಿಎಂ ಮಾಡಬೇಕು ಎಂದು ಗುಂಪು ಕಳಿಸಿದವರು ಯಾರು. ಸಿದ್ದರಾಮಯ್ಯರಾ ಅಥವಾ ನಾವಾ ಎಂದು ಜೋಶಿ ವ್ಯಂಗ್ಯವಾಡಿದರು.